ಮಹರ್ಷಿ ವಾಲ್ಮೀಕಿ ಸಿದ್ಧಾಂತ ಯುವಪೀಳಿಗೆಯಲ್ಲಿ ಬದಲಾವಣೆ ತರಲಿ: ಧರ್ಮೇಗೌಡ

valmiki jayanti in ckm
Published on

ಚಿಕ್ಕಮಗಳೂರು: ಆದಿಕವಿ ವಾಲ್ಮೀಕಿಯ ಮೌಲ್ಯ-ಸಿದ್ಧಾಂತಗಳು ಸಮಾಜದ ಪರಿವರ್ತನೆಗೆ ದಾರಿದೀಪವಾಗಿದ್ದು ಯುವಪೀಳಿಗೆಯಲ್ಲಿ ಬದಲಾವಣೆ ತರಲಿ ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆದಿಕವಿ ವಾಲ್ಮೀಕಿ ಮಹರ್ಷಿಗಳು ಮನ ಪರಿವರ್ತನೆ ಹೊಂದಿ ಶ್ರೇಷ್ಠ ಮಹಾಕಾವ್ಯ ರಾಮಾಯಣ ರಚಿಸಿದ ಮಹಾನ್ ಕವಿ. ಭಾರತವು ಹಲವು ವಿಭಿನ್ನ ಸಂಸ್ಕøತಿ ಆಚರಣೆ ಹೊಂದಿದ್ದು ಕಾಳಿದಾಸ, ವಾಲ್ಮೀಕಿ, ಕುವೆಂಪು ಸೇರಿದಂತೆ ಹಲವು ಮಹಾನ್ ಪುರುಷರ ನೆಲೆವೀಡು. ಸಮಾಜದಲ್ಲಿ ಆಚರಿಸುವ ಮಹನೀಯರ ಜಯಂತ್ಯುತ್ಸವಗಳು ಸಮಾಜದ ಪರಿವರ್ತನೆಗೆ ದಾರಿದೀಪವಾಗಬೇಕು ಎಂದರು.

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಲ್ಲಿ ಯಶಸ್ಸಿಗೆ ಇಂತಹ ಮಹನೀಯರ ಜಯಂತಿ ಆಚರಣೆಗಳು ಮಹತ್ವಪೂರ್ಣ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಜಯಂತಿಯನ್ನು ರಾಜ್ಯಾದ್ಯಂತ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಶ್ರೇಷ್ಠರಿಂದ ರಚಿತಗೊಂಡ ಮಹಾಕಾವ್ಯಗಳು ಸಮಾಜದ ಮೇಲೆ ಪರಿಣಾಮ ಬೀರಿದ್ದು ಈ ಬಗ್ಗೆ ಪಂಡಿತ್ ನೆಹರೂ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಕೃತಿಯಲ್ಲಿ ಬರೆದಿರುವುದನ್ನು ಸ್ಮರಿಸಬಹುದು ಎಂದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಮಮತೆ, ತ್ಯಾಗ, ಮಾತಾಪಿತೃಗಳು, ಅತಿಥಿ ಸತ್ಕಾರ ಸೇರಿದಂತೆ ಹಲವು ಮಾನವೀಯ ಅಂಶಗಳಿಗೆ ಮಹತ್ವ ನೀಡಿದ್ದು ಇದು ಭಾರತೀಯ ಸಂಸ್ಕøತಿ, ಆಚಾರ-ವಿಚಾರವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದೇ ವೇಳೆ ಸರ್ದಾರ್ ವಲ್ಲಭಬಾಯ್ ಪಟೇಲ್ ಜಯಂತಿಯ ರಾಷ್ಟ್ರೀಯ ಸದ್ಭಾವನ ದಿನದ ಪ್ರಯುಕ್ತ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಏಕತಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಸೋಮಶೇಖರ್, ತಾಪಂ ಅಧ್ಯಕ್ಷೆ ಶಾರದಾ ಶಶಿಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್, ಜಿಪಂ ಸಿಇಒ ಎಸ್,ಪೂವಿತಾ, ಎಎಸ್‍ಪಿ ಎನ್.ಎಸ್.ಶ್ರುತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net