

ಬ್ಯಾಡಗಿ: ತಾಲೂಕಿನ ಎಲ್ಲ ಶಾಲೆ - ಕಾಲೇಜುಗಳು, ಗ್ರಾ.ಪಂ. ಕಾರ್ಯಾಲಯ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಾಲ್ಮೀಕಿ ಜಯಂತ್ಯುತ್ಸವ ಆಚರಿಸಬೇಕು. ನಿರ್ಲಕ್ಷ್ಯತೋರಿದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಎ. ಪ್ರಸಾದ ಎಚ್ಚರಿಕೆ ನೀಡಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ವಾಲ್ಮೀಕಿ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅ. 28ರಂದು ಬೆಳಗ್ಗೆ 9 ಗಂಟೆಗೆ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ವಾಲ್ಮೀಕಿ ಜಯಂತಿ ಆಚರಿಸಿ, ಸಾಮೂಹಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಆಚರಣೆ ಕುರಿತು ನಿರ್ಲಕ್ಷಿಸುವ ಅಧಿಕಾರಿಗಳ ಮೇಲೆ ಗಂಭೀರ ಪ್ರಕರಣವೆಂದು ಪರಿಗಣಿಸಲಾಗುವುದು ಎಂದರು.
ಅದ್ದೂರಿ ಮೆರವಣಿಗೆ: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ. ದೊಡ್ಡಬಸವರಾಜ ಮಾತನಾಡಿ, ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದೊಂದಿಗೆ ಪಟ್ಟಣದ ವಾಲ್ಮೀಕಿ ಬಡಾವಣೆಯಿಂದ ಆರಂಭವಾಗುವ ಮೆರವಣಿಗೆ ಹಳೇ ಪುರಸಭೆ ಮೂಲಕ ಪ್ರಮುಖ ಬೀದಿಗಳಲ್ಲಿ ತೆರಳಲಿದ್ದು, ಜಾಂಜ್ ಮೇಳ ಸೇರಿ ವಿವಿಧ ಕಲಾವಿದರ ತಂಡಗಳು ಪಾಲ್ಗೊಳ್ಳಲಿವೆ ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ಅಧಿಕಾರಿ ಹನುಮಂತಪ್ಪ ಲಮಾಣಿ, ತಾ.ಪಂ. ಇಒ ಕೆ.ಎಂ. ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಹಿಂದುಳಿದ ವರ್ಗಗಳ ವಿಸ್ತಿರ್ಣಾಧಿಕಾರಿ ಎಸ್.ಎ. ಪ್ರಸಾದಿಮಠ, ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮ್ಯಾಗೇರಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಹೊನ್ನೂರಪ್ಪ ಕಾಡಸಾಲಿ, ಮುಖಂಡರಾದ ಶಿವಾನಂದ ಯಮನಕ್ಕನವರ, ಸುರೇಶ ಆಸಾದಿ, ರಮೇಶ ಕೋಟಿ, ಎಂ. ಭೀಮಾನಾಯ್ಕ, ಹನುಮಂತಪ್ಪ ಕುರಕುಂದಿ, ಆನಂದ ಮುದಕಮ್ಮನವರ, ಮಲ್ಲೇಶಪ್ಪ ಒಳಗುಂದಿ, ಶ್ರೀರಾಮ ಕೊರೇರ, ಈರಪ್ಪ ತೆರೇದಹಳ್ಳಿ ಇತರರಿದ್ದರು.