

ಮಂಡ್ಯ: ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಅವರು ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಬಣ್ಣಿಸಿದರು.
ನಗರದ ಬಿಜೆಪಿ ವಿಕಾಸ ಭವನದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಭಗವಾನ್ ರಾಮನ ಕಟ್ಟಾ ಭಕ್ತನಾಗಿ ಪರಿವರ್ತನೆಯಾದ ವಾಲ್ಮೀಕಿ ಅವರು ವರ್ಷಗಳ ಕಾಲ ಧ್ಯಾನ ಮಾಡಿದರು. ಒಂದು ದೈವಿಕ ಧ್ವನಿಯ ವಾಲ್ಮೀಕಿ ಎಂಬ ಹೆಸರನ್ನು ನೀಡಿತು. ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂಬ ಕಾರಣಕ್ಕಾಗಿ ಅವರನ್ನು ಆದಿಕವಿ ಎಂದು ಗೌರವಿಸಲಾಯಿತು. ಅವರ ಕೃತಿ ಅದರಲ್ಲಿಯೂ ವಿಶೇಷವಾಗಿ ಮಹಾಕಾವ್ಯ ರಾಮಾಯಣ ಎಂದೆಂದಿಗೂ ಸಾರ್ವಕಾಲಿಕ ಎಂದರು.
ಸದಸ್ಯತ್ವ ಅಭಿಯಾನ ವಿಭಾಗ ಪ್ರಮುಖ್ ಫಣೀಶ್ ಮಾತನಾಡಿ, ನಗರದ ಯಾವುದಾದರೂ ಪ್ರಮುಖ ರಸ್ತೆಗೆ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡುವುದು ಹಾಗೂ ಅವರ ಹೆಸರಿನಲ್ಲಿ ಬಡಾವಣೆಯನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅವರೂ ಸಹ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ವಿವೇಕ್, ಆನಂದ್, ಕೆಂಪಬೋರಯ್ಯ ಇತರರಿದ್ದರು.