

ಮಂಡ್ಯ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಲ್ಲಿ ನೀಡಿರುವ ಆದರ್ಶಗಳು ವಿಶ್ವದ ಎಲ್ಲ ಜನರಿಗೂ ಅನ್ವಯವಾಗುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ಅಂತರ, ಶೈಕ್ಷಣಿಕ ಹಾಗೂ ಔದ್ಯೋಗಿಕ ಭೇದ ಭಾವಗಳನ್ನು ತ್ಯಜಿಸಿ ಅಸಮಾನರಲ್ಲಿ ಸಮಾನರಾಗಿ, ಅಸಾಮಾನ್ಯರಲ್ಲಿ ಸಮಾನರಾಗಿ ನಿಲ್ಲಬೇಕಾದರೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಳ್ಳಬೇಕು. ಅದನ್ನು ಉಪಯೋಗಿಸಿಕೊಂಡವರು ಅದೃಷ್ಟವಂತನಾಗುತ್ತನೆ. ಅವಕಾಶವನ್ನು ಸೃಷ್ಟಿಸಿಕೊಂಡವನು ಬುದ್ಧಿವಂತನಾಗುತ್ತಾನೆ. ಪ್ರಸ್ತುತದಲ್ಲಿ ನಾವು ಅವಕಾಶವನ್ನು ಸೃಷ್ಟಿಸಿಕೊಳ್ಳುವಂತಹ ಬುದ್ಧಿವಂತನಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಮಹಾನ್ ಚೇತನರ ಜಯಂತಿಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು. ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಮಾಡಬೇಕು. ಬದುಕಿನಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ರಾಮಾಯಣ ಉದಾಹರಣೆಯಾದರೆ, ಬದುಕಿನಲ್ಲಿ ತಪ್ಪುಗಳನ್ನು ಮಾಡಬಾರದು ಎಂಬುದಕ್ಕೆ ಮಹಾಭಾರತ ನಿದರ್ಶನವಾಗಿದೆ ಎಂದರು.
ದಂತ ವೈದ್ಯೆ ಡಾ.ಸುಗುಣಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ, ಮುಖಂಡರಾದ ಪುಟ್ಟಸ್ವಾಮಿ ನಾಯಕ, ಚಂದ್ರನಾಯಕ, ಕೃಷ್ಣನಾಯಕ, ಟಿ.ಕೃಷ್ಣಯ್ಯ ಇತರರಿದ್ದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.