

ಗುಂಡ್ಲುಪೇಟೆ: ಮಹರ್ಷಿ ವಾಲ್ಮೀಕಿ ತತ್ವ, ಆದರ್ಶಗಳನ್ನು ಯುವಕರು ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ರಾಮಾಯಣ ಮಹಾಕಾವ್ಯ ವಿಶ್ವದ ಅತಿ ಹೆಚ್ಚಿನ ಭಾಷೆಗಳಿಗೆ ಭಾಷಾಂತರವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹರ್ಷಿಗಳು ನಡೆದು ಬಂದ ಹಾದಿ, ಅವರ ಜೀವನ ಚರಿತ್ರೆ ಮತ್ತು ಅವರು ರಚಿಸಿದ ವಾಲ್ಮೀಕಿ ರಾಮಾಯಣ ಗ್ರಂಥ ಸೇರಿದಂತೆ ಸಮಾಜಕ್ಕೆ ಸಂದೇಶಗಳನ್ನು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಜಿ.ಎನ್.ಮಹೇಶ್ ಮಾತನಾಡಿ, ವಾಲ್ಮೀಕಿ ಮಹರ್ಷಿ ಹುಟ್ಟು, ಸಾಧನೆ, ರಾಮಾಯಣ ಗ್ರಂಥ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಇಂದಿಗೂ ಪ್ರಸ್ತುತವಾಗಿರುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ತಾಪಂ ಇಒ ಷಣ್ಮುಖ, ಪುರಸಭೆ ಅಧ್ಯಕ್ಷ ಜಿ.ಎಸ್.ಕಿರಣ್ ಗೌಡ, ಸದಸ್ಯರಾದ ಕಪ್ಪಣ್ಣ, ಕುಮಾರ್, ನಾಯಕ ಸಮುದಾಯದ ಮುಖಂಡರು ಇದ್ದರು.