

ಪಾಂಡವಪುರ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕೃತಿ ಆದರ್ಶಪ್ರಾಯ ಸಮಾಜದ ಪ್ರತಿಬಿಂಬವಾಗಿದೆ ಎಂದು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಬೇಡನಾಗಿದ್ದ ವಾಲ್ಮೀಕಿ ಮನಪರಿವರ್ತನೆಗೊಂಡು ತಪಸ್ವಿಯಾಗಿ ಶ್ರೇಷ್ಠ ಕಾವ್ಯ ರಚಿಸಿದರು. ರಾಮಾಯಣ ಕೃತಿ ಸಮಾಜಕ್ಕೆ ಮಾದರಿಯಾಗಿದೆ. ಒಂದು ಸಮಾಜದ ರಾಜನಾದವನು ತನ್ನ ರಾಜ್ಯದಲ್ಲಿ ಸೈನಿಕರು, ಸಾಮಾನ್ಯ ಪ್ರಜೆಗಳು ಹೇಗಿರಬೇಕು, ಯಾವ ರೀತಿ ಜೀವನ ನಡೆಸಬೇಕು, ಗುರು-ಹಿರಿಯರು, ಪಾಲಕರನ್ನು ಹೇಗೆ ಗೌರವಿಸಬೇಕು ಎನ್ನುವ ಸಾಕಷ್ಟು ಸದ್ಗುಣಗಳ ಬಗ್ಗೆ ಈ ಕೃತಿ ಮಾರ್ಗ ತೋರಿದೆ. ಸಾಧನೆ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬರಿಗೂ ಇವರ ಕೃತಿ ಸ್ಫೂರ್ತಿದಾಯಕ. ವಾಲ್ಮೀಕಿ ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾದವರಲ್ಲ. ಸಮಾಜದ ಪ್ರತಿಯೊಬ್ಬರ ಆಸ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ತಾಪಂ ಇಒ ವೀಣಾ ಮಾತನಾಡಿ, ರಾಮಾಯಣ ಹಾಗೂ ಮಹಾಭಾರತ ಎರಡು ಕೃತಿಗಳು ದೇಶದ ಶ್ರೇಷ್ಠ ಕೃತಿಗಳಾಗಿವೆ. ವಾಲ್ಮೀಕಿ ರಾಮಾಯಣ ಹಲವಾರು ಕೃತಿಗಳ ರಚನೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯಾಗಿದೆ. ಸಮಾಜದಲ್ಲಿ ಒಬ್ಬ ಕೆಟ್ಟ ವ್ಯಕ್ತಿ ಜೀವನದಲ್ಲಿ ಮನಪರಿವರ್ತನೆಗೊಂಡು ಸಮಾಜದ ಉತ್ತುಂಗ ಸ್ಥಿತಿಗೆ ಏರಬಹುದು ಎನ್ನುವುದಕ್ಕೆ ವಾಲ್ಮೀಕಿ ಮಾದರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವಾರು ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ನಾಶಮಾಡಿಕೊಳ್ಳುತ್ತಿರುವ ಯುವ ಜನಾಂಗಕ್ಕೆ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ ತಿಳಿಸಿ ಬದಲಾವಣೆಯತ್ತ ಕರೆತರಬೇಕಾಗಿದೆ. ಅವರ ಆದರ್ಶ, ಮೌಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಮಾತನಾಡಿ, ಸಮಾಜಕ್ಕೆ ಆದರ್ಶವಾದ ರಾಮಾಯಣ ಕೃತಿ ರಚಿಸಿಕೊಡುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಸಹಕಾರಿಯಾದ ವಾಲ್ಮೀಕಿ ಹೆಸರು ಸೂರ್ಯ, ಚಂದ್ರ ಇರುವ ತನಕ ಚಿರಸ್ಥಾಯಿಯಾಗಿ ಉಳಿಯಲಿದೆ. ವಾಲ್ಮೀಕಿ ಎನ್ನುವ ಹೆಸರೇ ಎಲ್ಲರಿಗೂ ದೊಡ್ಡ ಆದರ್ಶ ಹಾಗೂ ಸ್ಫೂರ್ತಿಯಾಗಿದೆ ಎಂದರು.
ಪ್ರಧಾನ ಭಾಷಣ ಮಾಡಿದ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಅವರನ್ನು ಅಭಿನಂಧಿಸಿದರು. ಗ್ರೇಡ್ 2 ತಹಸೀಲ್ದಾರ್ ಎಸ್.ಸಂತೋಷ್, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಸಿಡಿಪಿಒ ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕೋಮಲಾ, ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಎಸ್.ಹಾಳಯ್ಯ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ಎಂ.ರಮೇಶ್, ಸಬ್ ಇನ್‌ಸ್ಪೆಕ್ಟರ್ ಧರ್ಮಪಾಲ್, ದಲಿತ ಮುಖಂಡರಾದ ಅಂಕಯ್ಯ, ದೇವರಾಜು, ರಾಮಯ್ಯ, ವಾಲ್ಮೀಕಿ ಸಂಘದ ಅಧ್ಯಕ್ಷ ದೇವಾನಂದ್ ಇತರರು ಇದ್ದರು.