ಜ್ಞಾನದ ಬೆಳಕು ನೀಡಿದ ಮಹರ್ಷಿ ವಾಲ್ಮೀಕಿ

07kkr3(10-25 valmiki jayanti
ಕಿಕ್ಕೇರಿ ಗ್ರಾಪಂ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೆ.ಬಿ.ಚಂದ್ರಶೇಖರ್, ಕೆ.ಜಿ. ಪುಟ್ಟರಾಜು, ರೇಣುಕಾ, ಸಿ.ಚಲುವರಾಜ್ ಮತ್ತಿತರರಿದ್ದರು.
Published on

ಕಿಕ್ಕೇರಿ: ಜಾತಿ ಧರ್ಮದ ಸಂಕೋಲೆ ದೂರ ಮಾಡಿ ಜ್ಞಾನದ ಬೆಳಕನ್ನು ರಾಮಾಯಣದ ಮೂಲಕ ತಿಳಿಸಿದವರು ಮಹರ್ಷಿ ವಾಲ್ಮೀಕಿ ಎಂದು ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ತಿಳಿಸಿದರು.

ಇಲ್ಲಿನ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ನಮ್ಮ ಪರಿಸರ ನಮ್ಮ ಗುಣವನ್ನು ರೂಪಿಸಲಿದೆ. ಗುಣವಂತ, ವಂಚನೆಕಾರ ಎನ್ನವುದನ್ನು ತಿಳಿಸುವುದು ನಮ್ಮ ಪರಿಸರವಾಗಿದೆ. ಅಜ್ಞಾನದ ಅಂಧಕಾರದಲ್ಲಿ ಬದುಕಿಗಾಗಿ ಸಿಕ್ಕ ಪ್ರಾಣಿಗಳನ್ನು ಕೊಂದು, ಹಣ, ಸಂಪತ್ತಿಗಾಗಿ ದರೋಡೆ ಮಾಡುತ್ತಿದ್ದ ರತ್ನಾಕರ. ನಾರದ ಮುನಿಗಳಿಂದ ಪರಿವರ್ತನೆಯಾಗಿ ಶ್ರೇಷ್ಠನಾಗಿ ನಾಡಿಗೆ ಮಹರ್ಷಿಯಾದರು ಎಂದರು.

ವಾಲ್ಮೀಕಿ ಅವರನ್ನು ಒಂದು ಸಮುದಾಯಕ್ಕೆ ಗುರುತಿಸದೆ ವಿಶ್ವ ಸಮುದಾಯದ ಮಹರ್ಷಿ ಎನ್ನಬೇಕಿದೆ. ಜಾತಿ, ಧರ್ಮಗಳ ಸಂಕೋಲೆಯಿಂದ ಹೊರಬಂದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ. ವಿಶ್ವಮಾನವರಾಗಿ ಬದುಕಲು ವಾಲ್ಮೀಕಿ ರಾಮಾಯಣ ಸಾಕು. ಮರ್ಯಾದಾ ಪುರುಷೋತ್ತಮ ರಾಮನ ಜೀವನ ಚರಿತ್ರೆ ಅರಿತರೆ ನಾಡು ಗಾಂಧೀಜಿ ಕನಸಿನಂತೆ ರಾಮರಾಜ್ಯವಾಗಲಿದೆ ಎಂದು ನುಡಿದರು.

ಪಿಡಿಒ ಸಿ.ಚಲುವರಾಜು ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರ ರಾಮಾಯಣ ಪವಿತ್ರ ಗ್ರಂಥವಾಗಿದೆ. ಅನಕ್ಷರತೆ ಎನ್ನುವುದು ಮಹಾನ್ ಶಾಪವಾಗಿದೆ. ಅನಕ್ಷರತೆಯಿಂದ ಜಗತ್ತನ್ನೇ ಅರಿಯದೆ ದರೋಡೆ ಕೋರನಾದ ರತ್ನಾಕರ. ಅರಿವು, ತಿಳಿವಳಿಕೆ ಬಂದ ಮೇಲೆ ಆದ ಪರಿವರ್ತನೆಯೇ ನಮಗೆ ದಾರಿದೀಪವಾಗಬೇಕಿದೆ. ಶಿಕ್ಷಣ ಮಕ್ಕಳ ಹಕ್ಕಾಗಲಿ. ಸಾಕ್ಷರತೆ ಸ್ವಾಭಿಮಾನ ಕಲಿಸಲಿದೆ. ಅಂಧಕಾರ, ಮೌಢ್ಯತೆಯನ್ನು ದೂರ ಮಾಡಲಿದೆ. ಧ್ಯಾನ ಮಾನಸಿಕ, ದೈಹಿಕ ಪರಿವರ್ತನೆಗೆ ಸಾಕ್ಷಿಯಾಗಲಿದೆ ಎಂದು ತೋರಿಸಿಕೊಟ್ಟ ವಾಲ್ಮೀಕಿ ಬದುಕನ್ನು ರೂಢಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಸದಸ್ಯರಾದ ಕೆ.ಜಿ. ಪುಟ್ಟರಾಜು, ರೇಣುಕಾ, ಮುಖಂಡ ಅರುಣಿ, ಶ್ರೀಕಾಂತ್, ಪೌರಕಾರ್ಮಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net