

ಹನೂರು: ಜೀವನಕ್ಕೆ ಸಂಸ್ಕಾರ ಮುಖ್ಯ ಎಂಬ ಸಂದೇಶವನ್ನು ರಾಮಾಯಣ ನೀಡಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ಧ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಹಿಂದುಗಳ ಪವಿತ್ರ ಗ್ರಂಥ. 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ಶ್ರೇಷ್ಠ ಕೃತಿಯಾಗಿದೆ. ನೈತಿಕ ಚೌಕಟ್ಟಿನಲ್ಲಿ ನಾವು ನಡೆಯಬೇಕು ಎಂಬ ಸಂದೇಶವಿದೆ ಎಂದರು.
ವಾಲ್ಮೀಕಿ ರಚಿಸಿದ ಮಹಾಕಾವ್ಯವನ್ನು ವಿದೇಶಿಯರೂ ಅಧ್ಯಯನ ನಡೆಸುತ್ತಿದ್ದಾರೆ. ರಾಮಾಯಣ ವಿಶ್ವದ ಎಲ್ಲ ಭಾಷೆಗಳಲ್ಲೂ ಲಭ್ಯವಿದೆ. ನಾವು ಕೇವಲ ಜಯಂತಿ ಆಚರಿಸಿದರೆ ಸಾಲದು. ಕಾವ್ಯದ ನೀತಿ ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸುವುದು ಸಾರ್ಥಕವಾಗುತ್ತದೆ ಎಂದರು.
ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಪಪಂ ಸದಸ್ಯರಾದ ಗಿರೀಶ್, ಸುದೇಶ್, ಹರೀಶ್‌ಕುಮಾರ್, ಕೊಳ್ಳೇಗಾಲ ಎಪಿಎಂಸಿ ಅಧ್ಯಕ್ಷ ಚಿಕ್ಕ ಮಾದನಾಯ್ಕ, ಮುಖಂಡರಾದ ಉದ್ದನೂರು ಸಿದ್ದರಾಜು, ಪಾಳ್ಯ ಕೃಷ್ಣ, ವೆಂಕಟರಮಣನಾಯ್ಡು, ಚಿಕ್ಕತಮ್ಮಯ್ಯ, ನಟರಾಜು, ನಿಂಗಶೆಟ್ಟಿ, ಮಾದೇಶ್ ಇತರರು ಇದ್ದರು.