

ತುಮಕೂರು : ಮಹಾಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ಬರೆದವರು ಶೂದ್ರರು ಎಂಬುದು ಹೆಮ್ಮೆಯ ವಿಚಾರ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣದಂಥ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಇಡೀ ಜಗತ್ತಿಗೆ ಆದರ್ಶಪ್ರಾಯರು ಎಂದು ಬಣ್ಣಿಸಿದರು.
ಕವಿಗಳಲ್ಲಿ ಆದಿಕವಿಯಾಗಿ ನಿಲ್ಲುವ ಮಹಾಕವಿ ವಾಲ್ಮೀಕಿ ಬರೆದ ರಾಮಾಯಣ ವಿಶ್ವದಲ್ಲಿಯೇ ಪುರಾತನವಾದದ್ದು. ಜ್ಞಾನೋದಯಕ್ಕೆ ದಾರಿದೀಪ. ಜಯಂತಿಯನ್ನು ರಾಷ್ಟ್ರ ವ್ಯಾಪಿಯಾಗಿ ಆಚರಿಸಲಾಗುತ್ತಿದೆ. ಈಗಿನ ಪೀಳಿಗೆಯು ವಾಲ್ಮೀಕಿ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನವೂ ಇದೆ: ರಾಮಾಯಣದಲ್ಲಿ ಸಾಹಿತ್ಯವಷ್ಟೇ ಅಲ್ಲ. ಪ್ರಚಲಿತದಲ್ಲಿರುವ ಎಲ್ಲ ಘಟನೆಗಳನ್ನೂ ಒಳಗೊಂಡಂತೆ ವಿಜ್ಞಾನ- ತಂತ್ರಜ್ಞಾನವೂ ಅಡಗಿದೆ. ಮಹಾಕೃತಿ ಮೂಲಕ ಜಗತ್ತಿನ ದರ್ಶನವನ್ನು ವಾಲ್ಮೀಕಿ ಮಾಡಿಸುವ ಮೂಲಕ ಶ್ರೇಷ್ಠ ದಾರ್ಶನಿಕ ಎನಿಸಿಕೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹೇಳಿದರು.
ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನೈಜ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ ಎಂದು ತೋರುವ ರೀತಿಯಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಬರೆದಿದ್ದಾರೆ. ವಾಲ್ಮೀಕಿ ಬರೆದ ರಾಮಾಯಣವು ಗಿರಿ-ಶಿಖರ, ಸೂರ್ಯ-ಚಂದ್ರ- ಭೂಮಿ ಇರುವಷ್ಟು ದಿನ ಇರುತ್ತದೆ. ಜಗತ್ತಿನಲ್ಲಿ ಯಾವ ಕವಿಯೂ ಹೇಳದ್ದನ್ನು ವಾಲ್ಮೀಕಿ ತಮ್ಮ ಕೃತಿಯಲ್ಲಿ ಹೇಳಿದ್ದಾರೆ ಎಂದರು. ತುಮಕೂರು ವಿವಿ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು ರಾಮಾಯಣ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ನೀಡಲಾಯಿತು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿ ತ್ಯಾಗರಾಜ್, ಕರ್ನಾಟಕ ವಾಲ್ಮೀಕಿ ಸೇನೆಯ ಅಧ್ಯಕ್ಷ ಪ್ರತಾಪ್ ಮದಕರಿ ಮತ್ತಿತರರು ಇದ್ದರು.
ಜಿಲ್ಲಾಡಳಿತಕ್ಕೆ ಮುಜುಗರ: ನಗರದ ಟೌನ್ ಹಾಲ್ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕರೊನಾ ನೆಪದಲ್ಲಿ ಅದ್ದೂರಿ ಮೆರವಣಿಗೆಗೆ ಅವಕಾಶ ಕೊಡಲಿಲ್ಲ ಎಂದು ಸಮುದಾಯದ ರಂಗನಾಥ್ ಕಾರ್ಯಕ್ರಮದ ವೇದಿಕೆ ಏರಿ ಅಸಮಾಧಾನ ವ್ಯಕ್ತಪಡಿಸಿದರು. ಇದು ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡಿತು.