ಜನಮನ ಮೆಚ್ಚಿದ ವಾಲಿವಧೆ ಯಕ್ಷಗಾನ ತಾಳಮದ್ದಲೆ

yaksha
ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ವಾಲಿವಧೆ ಯಕ್ಷಗಾನ ತಾಳಮದ್ದಲೆಯ ಭಾಗವತಿಕೆಯಲ್ಲಿ ಕೊಳಗಿ ಕೇಶವ ಹೆಗಡೆ, ಚಂಡೆ ಕಲಾವಿದ ಕೆಸರಕೊಪ್ಪ ವಿಘ್ನೇಶ್ವರ, ಮದ್ದಲೆಯಲ್ಲಿ ಯಲ್ಲಾಪುರದ ಶಂಕರ ಭಾಗವತ ಇದ್ದರು.
Published on

ಚಿಕ್ಕಮಗಳೂರು: ಹವ್ಯಕ ಬಳಗದಿಂದ ನಗರದ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕವಿ ಪಾರ್ತಿಸುಬ್ಬ ಅವರ ವಾಲಿವಧೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ರಾಮಾಯಣದ ಅಂತರಾರ್ಥ ಆ ಕಾಲದ ಧರ್ಮ, ನ್ಯಾಯ, ನೀತಿ, ಉನ್ನತ ಮೌಲ್ಯಗಳು, ಮರ್ಯಾದಾ ಪುರುಷೋತ್ತಮ ರಾಮನ ಆದರ್ಶ, ಕರುಣೆ, ಪ್ರೀತಿ, ವಾತ್ಸಲ್ಯ, ನಡೆ-ನುಡಿ ನಿರ್ಣಯಗಳನ್ನು ಪಾತ್ರಧಾರಿಗಳು ಎಳೆಎಳೆಯಾಗಿ ಬಿಡಿಸಿಟ್ಟರು.
ಭಾಗವತರ ಕಂಚಿನ ಕಂಠದ ಗಾಯನ, ಕಲಾವಿದರ ಚುರುಕು ಸಂಭಾಷಣೆ, ಪ್ರಾಸಬದ್ಧ ಮಾತು, ನವಿರು ಹಾಸ್ಯ, ಮಾತಿನ ಚಾತುರ್ಯ ಸಭಿಕರನ್ನು ನಾಲ್ಕು ಗಂಟೆಗಳ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಭಾಗವತಿಕೆಯಲ್ಲಿ ಕೊಳಗಿ ಕೇಶವ ಹೆಗಡೆ, ಚಂಡೆಯಲ್ಲಿ ಕೆಸರಕೊಪ್ಪ ವಿಘ್ನೇಶ್ವರ, ಮದ್ದಲೆಯಲ್ಲಿ ಯಲ್ಲಾಪುರದ ಶಂಕರ ಭಾಗವತ ಸಭಿಕರ ತಲೆದೂಗುವಂತೆ ಮಾಡಿದರು.
ಶ್ರೀರಾಮನ ಪಾತ್ರದಲ್ಲಿ ಮಧೂರು ವಾಸುದೇವ ರಂಗಾ ಭಟ್, ವಾಲಿಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಸುಗ್ರೀವನಾಗಿ ವೃತ್ತ ನಿರೀಕ್ಷಕ ವಿನೋದ್ ಭಟ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಸಂಭಾಷಿಸುವ ಮೂಲಕ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.
ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಡಿ ಹವ್ಯಕ ಸಮುದಾಯದವರು ಕಲ್ಯಾಣ ಮಂಟಪದಲ್ಲಿ ಕಲೆತು ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಬೆಳಗ್ಗೆ ಸತ್ಯನಾರಾಯಣ ಪೂಜೆ ನೆರವೇರಿತು. ಉಪನ್ಯಾಸಕ ವಿದ್ವಾನ್ ದತ್ತಮೂರ್ತಿ ಭಟ್ ಅವರಿಂದ ಪ್ರವಚನ ಜರುಗಿತು. ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಸುರೇಖಾ ಗೋಪಾಲ ಹೆಗಡೆ ಅವರಿಂದ ಸಂಗೀತ ರಸದಾರ ಗೀತ ಗಾಯನ ನಡೆಯಿತು.
ಹವ್ಯಕ ಬಳಗದ ಅಧ್ಯಕ್ಷ ಜಿ.ರಾಮ, ಹಾಸ್ಯಗಾರ ಉಪಾಧ್ಯಕ್ಷರಾದ ಪರಶುರಾಮ ಜೋಶಿ, ಗಜಾನನ ವಿ. ಹೆಗಡೆ, ಸಂಚಾಲಕ ಕೆ.ಎನ್.ಮಂಜುನಾಥ ಭಟ್, ಕಾರ್ಯದರ್ಶಿ ಶಂಕರನಾರಾಯಣ ಭಟ್, ರಾಜಾರಾಮ ಕೋಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net