ಬೆಂಗಳೂರಿನಲ್ಲೇ ಉಳಿದಿರುವ ವಿವಿಧ ರಾಜ್ಯಗಳ ವಲಸಿಗರು ವಿಶೇಷ ರೈಲಿನಲ್ಲಿ ಊರಿಗೆ ಪ್ರಯಾಣ

10-klr-59 Alternative
Published on

ಕೋಲಾರ: ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲೇ ಉಳಿದಿರುವ ವಿವಿಧ ರಾಜ್ಯಗಳ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಿಕೊಡುವ ಭಾಗವಾಗಿ ಬೆಂಗಳೂರಿನಿಂದ ಬಂದಿದ್ದ 2400ಕ್ಕೂ ಹೆಚ್ಚು ಕಾರ್ಮಿಕರು ಭಾನುವಾರ ಎರಡು ರೈಲುಗಳಲ್ಲಿ ಮಾಲೂರು ರೈಲು ನಿಲ್ದಾಣದಿಂದ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ 2400ಕ್ಕೂ ಹೆಚ್ಚು ಮಂದಿಗೆ ತೆರಳಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಾಲೂರಿನ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರಿನಿಂದ ಸುಮಾರು 90 ಬಿಎಂಟಿಸಿ ಬಸ್‌ಗಳಲ್ಲಿ ಕಾರ್ಮಿಕರನ್ನು ಕರೆತರಲಾಯಿತು. ಕಾರ್ಮಿಕರು ಸರಕು ಸರಂಜಾಮುಗಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ರೈಲು ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿತ್ತು. ನೂಕುನುಗ್ಗಲು ತಪ್ಪಿಸಲು ಬ್ಯಾರಿಕೇಡ್ ಹಾಕಲಾಗಿತ್ತು. ಬಸ್‌ಗಳಲ್ಲಿ ಬಂದವರನ್ನು ದೈಹಿಕ ಅಂತರ ಕಾಯ್ದುಕೊಂಡು ರೈಲಿಗೆ ಹತ್ತಿಸಲಾಯಿತು. ರೈಲ್ವೆ ಅಧಿಕಾರಿಗಳು ಪ್ರತಿಯೊಬ್ಬರ ಆಧಾರ್‌ಕಾರ್ಡ್ ಪರಿಶೀಲಿಸಿದರು.

ಎಎಸ್ಪಿ ಜಾಹ್ನವಿ, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ನಾಗರಾಜ್, ತಹಸೀಲ್ದಾರ್ ಎಂ.ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್ ಕೆ.ಎಸ್.ಆಂಜಿನಪ್ಪ ಪೊಲೀಸ್ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶುಕ್ರವಾರ ಮತ್ತು ಶನಿವಾರ ಬೆಂಗಳೂರು, ಕೆ.ಆರ್.ಪುರಂ ಸೇರಿ ಹಲವು ಭಾಗಗಳಲ್ಲಿ ವಾಸವಿದ್ದ ಬಿಹಾರ, ಒರಿಸ್ಸಾ, ಜಾರ್ಖಂಡ್ ಹಾಗೂ ಉತ್ತರ ಭಾರತದ ಕೆಲ ರಾಜ್ಯಗಳ 1200ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಶೇಷ ರೈಲುಗಳಲ್ಲಿ ಕಳುಹಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net