

ಶಿರಸಿ: ರಾಜ್ಯದೆಲ್ಲೆಡೆ ರೈತರು, ಮಠಗಳ ಭೂಮಿಯನ್ನು ವಕ್ಪ್ ಆಸ್ತಿಯಾಗಿ ಘೊಷಿಸಿ, ರಾಜ್ಯ ಸರ್ಕಾರ ವಿವಾದದ ಸುಳಿಯಲ್ಲಿದ್ದಾಗಲೇ ತಾಲೂಕಿನಲ್ಲಿಯೂ ಇಂಥದ್ದೇ ಒಂದು ಪ್ರಕರಣ ನಡೆದಿದೆ ಎಂಬ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಶನಿವಾರ ಹರಿದಾಡಿದೆ.
ಸರ್ಕಾರಿ ಜಾಗದ ಪಹಣಿ ಪತ್ರಿಕೆಯ ಕಾಲಂ ನಂ. 11ರಲ್ಲಿ ವಕ್ಪ್ ಆಸ್ತಿ ಎಂದು ನೋಂದಣಿ ಆಗಿರುವ ಈ ಪಹಣಿ ಪತ್ರಿಕೆ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕರಿಂದ ಅಸಮಾಧಾನವೂ ಕೇಳಿಬಂದಿದೆ.
ಪ್ರಸಕ್ತ ಈ ಜಾಗ ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ 766ಇ ಪಕ್ಕದ, ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಸರ್ವೆ ನಂ. 12 ಹಾಗೂ ಸ.ನಂ. 40ರಲ್ಲಿದೆ. ಈ ಜಾಗ ಹಿಂದಿನಿಂದಲೂ ಖಬರಸ್ತಾನವಾಗಿ ಬಳಸಿಕೊಂಡು ಬರಲಾಗಿದೆ. ಸರ್ಕಾರಿ ಜಾಗವನ್ನು ಸಾರ್ವಜನಿಕರಿಗೆ ಬಿಟ್ಟುಕೊಡಲು ಮೀನಮೇಷ ಎಣಿಸುವ ಕಂದಾಯ ಇಲಾಖೆ ಈ ಜಾಗವನ್ನು ಹೇಳದೇ ಕೇಳದೇ ವಕ್ಪ್ ಆಸ್ತಿಯನ್ನಾಗಿ ಬದಲಾಯಿಸಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ವಿಷಯ ಗಂಭೀರತೆ ತೆಗೆದು ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಜಾಗದ ಕಾಗದಪತ್ರಗಳನ್ನು ಪರಿಶೀಲಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟು 7 ಎಕರೆ 28 ಗುಂಟೆ ಜಾಗವು ವಕ್ಪ್ ಮಾಲೀಕತ್ವದ್ದಾಗಿದ್ದು, 1991ರಲ್ಲಿಯೇ ವಕ್ಪ್ಗೆ ನೋಂದಣಿಯಾಗಿದ್ದಾಗಿದೆ. ಇತ್ತೀಚೆಗೆ ಜಾಗ ನೋಂದಣಿ ಆಗಿದ್ದಲ್ಲ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಒಂದು ಪಕ್ಕದಲ್ಲಿ ಸರ್ಕಾರಿ ಕಂದಾಯ ಭೂಮಿ ಸರ್ವೆ ನಂಬರ್ 12ರಲ್ಲಿ 4.36 ಎಕರೆ ಪ್ರದೇಶ ಹಾಗೂ ಸರ್ವೆ ನಂಬರ್ 40ರಲ್ಲಿ 2.32 ಎಕರೆ ಜಾಗ ವಕ್ಪ್ ಹೆಸರಲ್ಲಿ ದಾಖಲಾಗಿದೆ. ಪ್ರಸ್ತುತ ಸ್ಥಳೀಯವಾಗಿ ಇದನ್ನು ರಾಜಕೀಯ ವಿಷಯವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಹಲವು ಗೊಂದಲಗಳಿಗೆ ಎಡೆ ಮಾಡಬಾರದು ಎಂದು ಈ ಸ್ಪಷ್ಟನೆ ನೀಡಿದ ಅವರು, ಈ ಜಾಗ ’1920ರಿಂದಲೇ ಪಹಣಿಯಲ್ಲಿ ಸರ್ಕಾರಿ ಜಾಗ ಎಂದಿದೆ. ಸ.ನಂ. 12 ಸ್ಮಶಾನ ಹಾಗೂ ಸ.ನಂ. 40 ಮಸಣವಟಿ ಎಂದು ದಾಖಲೆ ಹೇಳುತ್ತವೆ. ಸರ್ಕಾರಿ ಗೆಜೆಟ್ ಅನುಸಾರವಾಗಿ ಕಾಲಂ ನಂಬರ್ 11ರಲ್ಲಿ 1991ರಲ್ಲಿ ವಕ್ಪ್ ಆಸ್ತಿ ಎಂದು ನೋಂದಣಿ ಆಗಿದೆ. ಈ ಬಗ್ಗೆ ಜನತೆಗೆ ಗೊಂದಲ ಬೇಡ’ ಎಂದಿದ್ದಾರೆ.