ವಿಎಕೆ ಫೌಂಡೇಷನ್​ನಿಂದ ಬೃಹತ್ ಉದ್ಯೋಗ ಮೇಳ

NEW VAK
Published on

ಹುಬ್ಬಳ್ಳಿ : ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಇಲ್ಲಿನ ಉಣಕಲ್ಲ ಕ್ರಾಸ್ ಬಳಿಯ ಕೆಎಲ್​ಇ ವಾಣಿಜ್ಯ ಮಹಾವಿದ್ಯಾಲಯ (ಪ್ರೇರಣಾ ಕಾಲೇಜ್ ಹತ್ತಿರ)ದಲ್ಲಿ ನ. 14ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 2 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಉದ್ಯೋಗ ನೀಡುವ ಗುರಿ ಇದೆ ಎಂದು ತಿಳಿಸಿದರು.

ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಬಿಇ, ಎಂಟೆಕ್, ಬಿಇಡಿ, ಡಿಇಡಿ, ಪಿಜಿ, ಎಂಎಸ್ಸಿ, ಎಂಎ, ಎಂಕಾಂ, ಜಿಎನ್​ಎಂ, ಬಿಎಸ್ಸಿ ನರ್ಸಿಂಗ್, ಬಯೊ ಮೆಡಿಕಲ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ ಹೊಂದಿರುವವರು ಪಾಲ್ಗೊಳ್ಳಬಹುದು ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರು ತಮ್ಮ ಶೈಕ್ಷಣಿಕ ದಾಖಲೆಗಳ ನಕಲು ಪ್ರತಿ, ಆಧಾರ್ ಕಾರ್ಡ್, ಬಯೋ ಡೇಟಾ, ಭಾವಚಿತ್ರಗಳನ್ನು ತರಬೇಕು. ಭಾಗವಹಿಸುವವರಿಗೆ ಉಪಹಾರದ ವ್ಯವಸ್ಥೆ ಇದೆ ಎಂದರು.

ವಿಹಾನ್ ಆಸ್ಪತ್ರೆ, ಫೋನ್ ಪೇ, ಆರ್​ಎನ್​ಎಸ್ ಮೋಟಾರ್ಸ್, ಶೋಧಾ ಟೋಯೊಟಾ, ವಿಭವ, ಮುತ್ತೂಟ ಫೈನಾನ್ಸ್, ಎಲ್​ಐಸಿ ಮತ್ತಿತರ ಸಂಸ್ಥೆಗಳು ಸಂದರ್ಶನ ನಡೆಸಲಿವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಅಶೋಕ ಕಾಟವೆ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

ಫೌಂಡೇಷನ್ ಸದಸ್ಯರಾದ ಸಚಿನ ಕಾಟವೆ, ಆನಂದ ಬಾಕಳೆ, ಸುಜನ ಇಜಾರೆ, ಕಾರ್ತಿಕ ಪವಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net