ಮೂಲಸೌಕರ್ಯ ವಂಚಿತ ವಾಜರಹಳ್ಳಿ ಕಾಲನಿ - ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು

17-bidadi-1
Published on

ಚೇತನ್ ಚಕ್ಕೆರೆ ಬಿಡದಿ

ಗ್ರಾಮ ಅಂದ ಮೇಲೆ ಮೂಲಸೌಕರ್ಯಗಳು ಇರಬೇಕು. ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಇರಲೇಬೇಕು. ಆದರೆ, ಇಲ್ಲೊಂದು ಕಾಲನಿಯಲ್ಲಿ ಮೂಲಸೌಕರ್ಯಗಳಿಲ್ಲದೆ ಜನರು ಪರಿತಪಿಸುತ್ತಿದ್ದಾರೆ.

ಹೌದು, ರಾಜ್ಯ ಸರ್ಕಾರ ಹಳ್ಳಿಗಳ ಉದ್ದಾರಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಆ ಹಣ ಎಲ್ಲ ಗ್ರಾಮಗಳನ್ನು ತಲುಪುತ್ತಿಲ್ಲ. ಇದಕ್ಕೆ ಉದಾಹರಣೆಯಂತಿದೆ ವಾಜರಹಳ್ಳಿ ಕಾಲನಿ.

ಕಾಲನಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 200 ಮಂದಿ ವಾಸಿಸುತ್ತಿದ್ದಾರೆ. ಇಂದಿಗೂ ಈ ಕುಗ್ರಾಮ ಮೂಲಸೌಕರ್ಯ ವಂಚಿತವಾಗಿದೆ.

ಕುಡಿಯಲು ಶುದ್ಧ ನೀರಿಲ್ಲ

ಕಾಲನಿ ನಿವಾಸಿಗಳು ಪ್ರತಿನಿತ್ಯ ಕಣ್ಣಲ್ಲಿ ಕಣ್ಣಿಟ್ಟು ನೀರು ಕುಡಿಯಬೇಕಾಗಿದೆ. ಕೊಳಾಯಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿರುವ ನೀರಿನ ತೊಂಬೆಗಳಲ್ಲೇ ನೀರು ಹಿಡಿಯುತ್ತಾರೆ. ಈ ತೊಂಬೆಗಳನ್ನು ಸ್ವಚ್ಛ ಮಾಡಿ ವರ್ಷಗಳೇ ಕಳೆದಿದ್ದು, ಹುಳುಗಳು ಉತ್ಪತ್ತಿಯಾಗಿವೆ. ಹಾಗಾಗಿ ಇಲ್ಲಿನ ಜನರು ಶುದ್ಧೀಕರಿಸಿಯೇ ನೀರನ್ನು ಕುಡಿಯುತ್ತಾರೆ. ಇನ್ನು ನೀರಿನ ತೊಂಬೆಗಳ ಸುತ್ತ ಸ್ವಚ್ಛತೆ ಮಾಯವಾಗಿದೆ. ಸುತ್ತಲೂ ಗಿಡಗಂಟಿಗಳು ಬೆಳೆದುನಿಂತಿವೆ. ಈ ಬಗ್ಗೆ ಗಮನ ಹರಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ಚರಂಡಿ ಇದ್ದರೂ ಪ್ರಯೋಜನಕ್ಕಿಲ್ಲ

ಈ ಕಾಲನಿಯಲ್ಲಿ ಬಹಳ ವರ್ಷಗಳ ಹಿಂದೆಯೇ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ತಲುಪಿದೆ. ಚರಂಡಿಯಲ್ಲಿ ಹೂಳು ತುಂಬಿದ್ದು, ಗಿಡಗಂಟಿಗಳು ಬೆಳೆದು ಚರಂಡಿ ಇದೆಯೋ ಇಲ್ಲವೋ ಎಂಬಂತಾಗಿದೆ. ಚರಂಡಿಯಲ್ಲಿ ಹಾಗೂ ಅಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳು ರಸ್ತೆಗೆ ಚಾಚಿಕೊಂಡಿರುವ ಕಾರಣದಿಂದಾಗಿ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿದೆ.

ಚರಂಡಿಗಳಲ್ಲಿ ನೀಡಿ ಸರಾಗವಾಗಿ ಹರಿಯದ ಕಾರಣ ತ್ಯಾಜ್ಯ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಅಕ್ಕಪಕ್ಕದ ಮನೆಗಳ ಎದುರು ತ್ಯಾಜ್ಯ ನೀರು ಹರಿದು ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಜತೆಗೆ ಸೊಳ್ಳೆಗಳು ಉತ್ಪತ್ತಿಯಾಗುವ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು ಕಾಲನಿ ಮಕ್ಕಳನ್ನು ಬಿಟ್ಟು ಬಿಡದೆ ಕಾಡುತ್ತಿದೆ.

ವಿದ್ಯುತ್ ಕಂಬಗಳಲ್ಲಿ ಹಸಿರು ಬಳ್ಳಿ

ಗ್ರಾಮದ ಹಲವು ವಿದ್ಯುತ್ ಕಂಬಗಳು ಸಂಪೂರ್ಣವಾಗಿ ಹಸಿರು ಬಳ್ಳಿಗಳಿಂದ ಆವೃತವಾಗಿವೆ. ವಿದ್ಯುತ್ ತಂತಿಗಳಿಗೂ ಬಳ್ಳಿಗಳು ಹಬ್ಬಿರುವುದರಿಂದ ಅಪಾಯ ಸಂಭವಿಸುವುದನ್ನು ತಳ್ಳಿಹಾಕುವಂತಿಲ್ಲ. ಅನಾಹುತ ಸಂಭವಿಸುವ ಮುನ್ನ ಬೆಸ್ಕಾಂ ಎಚ್ಚೆತ್ತುಕೊಳ್ಳಬೇಕಿದೆ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ವಾಜರಹಳ್ಳಿ ಕಾಲನಿಯಲ್ಲಿ ಕಣ್ಣಿಗೆ ರಾಚುವಂತೆ ಸಮಸ್ಯೆಗಳು ಕಂಡರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಗ್ರಾಪಂ ಸದಸ್ಯರೂ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿಲ್ಲ.

ನಮ್ಮ ಕಾಲನಿಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ಮನವಿಗಳು ಕಸದ ಬುಟ್ಟಿ ಸೇರಿವೆ. ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳು ಸೇರಿಕೊಂಡಿವೆ.ಚನ್ನಪ್ಪ, ಕಾಲನಿ ಹಿರಿಯ ನಿವಾಸಿ
ನಮ್ಮದು ಗ್ರಾಮ ಅಲ್ಲ, ಕಾಲನಿ ಅಂತ ಅಧಿಕಾರಿಗಳು ಅಸಡ್ಡೆ ತೋರಿಸುತ್ತಿರಬೇಕು. ಗ್ರಾಮದಲ್ಲಿ ನಾವು ಮನುಷ್ಯರಂತೆಯೇ ವಾಸಿಸುತ್ತಿದ್ದೇವೆ. ನಮಗೂ ಮೂಲಸೌಕರ್ಯಗಳು ಸಿಗಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕು.ತುಳಸಿರಾಮ, ಕಾಲನಿ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net