

ಶಿವಮೊಗ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಮಾ.14ರವರೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ಜನ್ಮ ಶತಮಾನೋತ್ಸವದ ಜಿಲ್ಲಾ ಪ್ರಭಾರಿ ಡಾ. ಲಕ್ಷ್ಮೀ ಅಶ್ವಿನ್ ಗೌಡ ತಿಳಿಸಿದರು.
ಫೆ.14ರಿಂದ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗಿದೆ. ವಾಜಪೇಯಿ ಅವರ ಸಾಧನೆ, ಅವರ ರಾಜಕೀಯ ನಡೆ, ಅಪರೂಪದ ವ್ಯಕ್ತಿತ್ವವನ್ನು ಜನಮಾನಸದಲ್ಲಿ ಶಾಶ್ವತಗೊಳಿಸುವ ಸಂಘಟನಾತ್ಮಕ ಕಾರ್ಯಕ್ರಮ ಇದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶ ಕಂಡ ಕವಿ ಹೃದಯದ ಪ್ರಧಾನಿ ವಾಜಪೇಯಿ. ಅತ್ಯುತ್ತಮ ಸಂಸದೀಯ ಪಟು. ಅತ್ಯುತ್ತಮ ಆಡಳಿತ ನೀಡಿದ ಪ್ರಧಾನಿ. ಆಂತರಿಕ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತ ವಿಶ್ವ ಗುರುವಾಗಲು ವಾಜಪೇಯಿ ಅವರ ಶ್ರಮ ಅಪಾರ. ಅವರು ಜೀವಿತಾವಧಿಯಲ್ಲಿ ಶಿವಮೊಗ್ಗ ಜಿಲ್ಲೆಗೂ ಭೇಟಿ ನೀಡಿದ್ದರು. ಅನೇಕರೊಂದಿಗೆ ಸಂಪರ್ಕ ಹೊಂದಿದ್ದರು. ಹಲವು ಭಾಷಣ ಮಾಡಿದ್ದರು. ಇದನ್ನೆಲ್ಲ ಸಂಗ್ರಹಿಸುವುದು, ಫೋಟೊ, ವಿಡಿಯೋಗಳ ಮಾಹಿತಿ ಪಡೆಯುವುದು ಈ ಕಾರ್ಯಕ್ರಮದ ಭಾಗವಾಗಿದೆ. ಇದಕ್ಕಾಗಿ ಜಿಲ್ಲೆ ಹಾಗೂ ಮಂಡಲ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಶತಮಾನೋತ್ಸವ ಆಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ, ವಿರಾಸತ್ ಸಮ್ಮೇಳನ ನಡೆಯಲಿದೆ. ಗಣ್ಯರು ವಾಜಪೇಯಿ ಬಗ್ಗೆ ವಿಚಾರಧಾರೆ ಹಂಚಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ವಾಜಪೇಯಿ ಅವರ ಜತೆಗಿನ ಫೋಟೊಗಳು, ಅಟಲ್‌ಜೀ ಇಲ್ಲಿನ ಮನೆಗಳಿಗೆ ಭೇಟಿ ನೀಡಿರುವುದು, ಮುಂತಾದ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಎಂ.ಬಿ.ಹರಿಕಷ್ಣ, ಪ್ರಮುಖರಾದ ಸುರೇಖಾ ಮುರಳೀಧರ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.