

ಲಕ್ಷ್ಮೇಶ್ವರ: ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ, ಮೌಲ್ಯಾಧಾರಿತ ರಾಜಕಾರಣ ಇಂದಿನ ಯುವ ಪೀಳಿಗೆಗೆ ಸದಾ ಮಾರ್ಗದರ್ಶನವಾಗಿದೆ ಎಂದು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಆನಂದ ತವರಿ ಹೇಳಿದರು.
ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಧಿಕಾರಕ್ಕಾಗಿ ಏನೆಲ್ಲ ಮಾಡಲು ಸಿದ್ಧರಿರುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗುಳಿದ ಶ್ರೇಯಸ್ಸು ಅಟಲ್‌ಜಿ ಅವರಿಗೆ ಸಲ್ಲುತ್ತದೆ. ಎಲ್ಲ ಜಾತಿ, ಮತ, ಪಂಥ, ಧರ್ಮ ಮತ್ತು ವಿರೋಧ ಪಕ್ಷದವರನ್ನೂ ಗೌರವದಿಂದ ಕಾಣುವ ಶ್ರೇಷ್ಠ ಶಕ್ತಿ ಅಟಲ್‌ಜಿಯವರದ್ದಾಗಿತ್ತು. ಕವಿ ಹೃದಯಿ, ಮಾನವತಾವಾದಿ ಅವರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಸೋಮಣ್ಣ ಡಾಣಗಲ್, ಅಶೋಕ ಶಿರಹಟ್ಟಿ, ಹನಮಂತಪ್ಪ ತಳವಾರ, ಈರಣ್ಣ ಅಕ್ಕೂರ, ಸುರೇಶ ಗೋದಿ, ಸದಾಶಿವ ಬಾಳಿಕಾಯಿ, ಈರಣ್ಣ ಅಳ್ಳಳ್ಳಿ, ನಿಂಗಪ್ಪ ಕುಂಬಾರ, ಈರಣ್ಣ ಪುಟ್ಟಪ್ಪನವರ, ಸಿದ್ದಪ್ಪ ಹರ್ತಿ, ಸಿದ್ಧಾರೂಢ ಗುಲಗಂಜಿ ಇದ್ದರು.