

ಉಡುಪಿ: ಮೂರು ಬಾರಿ ದೇಶದ ಪ್ರಧಾನಿಯಾಗಿ ಅತ್ಯಮೂಲ್ಯ ಸೇವೆ ಸಲ್ಲಿಸಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಘಟ್ಟದಲ್ಲಿ ದೇಶವು ಮಹತ್ತರ ಅಭಿವೃದ್ಧಿ ದಾಖಲಿಸಿದೆ. ಅವರ ಜೀವನಾದರ್ಶ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಮಂಗಳವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 4ನೇ ಪುಣ್ಯ ಸಂಸ್ಮರಣೆಯಲ್ಲಿ ಅಟಲ್ ಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಆಟಲ್ ಜೀ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಪರಿಕಲ್ಪನೆಯನ್ನು ದೇಶಕ್ಕೆ ನೀಡಿದ ಪರಿಣಾಮವಾಗಿ ಇಂದು ದೇಶಾದ್ಯಂತ ಉತ್ತಮ ಗುಣಮಟ್ಟದ ರಸ್ತೆಗಳು ನಿರ್ಮಾಣಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಜೀವನ ಏಕರೀತಿಯಲ್ಲಿದ್ದರೆ ಮಾತ್ರ ಯಶಸ್ವೀ ಜನ ನಾಯಕನಾಗಲು ಸಾಧ್ಯ. ಅಟಲ್ ಜೀ ಬಿಟ್ಟು ಹೋದ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದೇ ಅವರ ತತ್ವ ಸಿದ್ಧಾಂತಗಳಿಗೆ ನೀಡುವ ನೈಜ ಗೌರವ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್ ಉಪಸ್ಥಿತರಿದ್ದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.