ಸಹೃದಯಿ ವಾಜಪೇಯಿ ನೆನಪು ಸದಾ ಹಸಿರು ; ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಭಿಮತ

25Tmk_Atal_Birthday_01
Published on

ತುಮಕೂರು  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕವಿಯಾಗಿ, ರಾಜಕಾರಣಿಯಾಗಿ, ಸಹೃದಯಿಯಾಗಿ ಜನರ ಮನಸ್ಸಿನಲ್ಲಿ ಹಸಿರಾಗಿದ್ದಾರೆ. ಇವರ ನಡೆ-ನುಡಿ ರಾಜಕಾರಣಿಗಳಿಗೆ ಆದರ್ಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಅಟಲ್‌ಜೀ ದೇಶಕಂಡ ಅಪರೂಪದ ರಾಜಕಾರಣಿ, ಅಜಾತಶತ್ರು ಎಂದು ಬಣ್ಣಿಸಿದರು. ಇಡೀ ವಿಶ್ವವೇ ಒಪ್ಪಿಕೊಂಡಂಥ ನಾಯಕ ವಾಜಪೇಯಿ. ಇವರ ಜತೆ ನಾವೆಲ್ಲ ಇದ್ದೆವು ಎಂಬುದು ಹೆಮ್ಮೆಯ ಸಂಗತಿ. ದೇಶದ ಮೂಲೆಮೂಲೆಗೂ ಸರಾಗವಾಗಿ ಸಂಚರಿಸಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ತನ್ಮೂಲಕ ಅವರು ದೇಶದ ಆರ್ಥಿಕ ಪ್ರಗತಿಗೂ ಕಾರಣೀಭೂತರಾಗಿದ್ದಾರೆ ಎಂದರು.

ಜನರಿಗೆ ತಲುಪುವ ಕೆಲಸ ಮಾಡಿ: ರಾಜಕಾರಣಿಗಳು ಮಾಡುವ ಕೆಲಸ ಜನರನ್ನು ತಲುಪಬೇಕು. ಮೊಬೈಲ್, ವಾಟ್ಸ್‌ಆ್ಯಪ್‌ಗಳಲ್ಲಿ ಹಾಕಿಕೊಳ್ಳುವುದರಿಂದ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಅದು ಜನರಿಗೂ ತಲುಪುವುದಿಲ್ಲ. ಹಾಗಾಗಿ, ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಕಾರ್ಯಗಳನ್ನು ರಾಜಕಾರಣಿಗಳು ಮಾಡಬೇಕು. ಈ ನಿಟ್ಟಿನಲ್ಲಿ ವಾಜಪೇಯಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ವಿಭಾಗೀಯ ಸಹಪ್ರಭಾರಿ ಲಕ್ಷ್ಮೀಶ್, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮುಖಂಡರಾದ ಹೆಬ್ಬಾಕ ರವಿಶಂಕರ್, ಎಸ್.ಡಿ. ದಿಲೀಪ್‌ಕುಮಾರ್, ಟಿ.ಆರ್.ಸದಾಶಿವಯ್ಯ, ವೈ.ಎಚ್.ಹುಚ್ಚಯ್ಯ, ವಿವಿ ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನಿಲ್‌ಕುಮಾರ್, ಪಿ.ಬಿ.ಚಂದ್ರಶೇಖರ ಬಾಬು, ಸಿ.ಎನ್. ರಮೇಶ್, ರುದ್ರೇಶ್, ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ಎನ್.ಎಸ್.ಜಯಕುಮಾರ್ ಮತ್ತಿತರರು ಇದ್ದರು.

ವಾಜಪೇಯಿ ಸಂಸತ್ ಪ್ರವೇಶಿಸಿದಾಗ ಪಂಡಿತ್ ಜವಹರಲಾಲ್ ನೆಹರೂ ಅತ್ಯಂತ ಎತ್ತರದ ಸ್ಥಾನದಲ್ಲಿದ್ದರು. ವಾಜಪೇಯಿ ಅವರ ಬಡವರಪರ ಕಾಳಜಿ, ಅಭಿವೃದ್ಧಿಯ ನಿಲುವುಗಳನ್ನು ನೆಹರೂ ಅವರೇ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕೊಂಡಾಡಿದ್ದರು. ಅನಿವಾರ್ಯವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಕೇಳುತ್ತಿರುವುದಾಗಿ ಹೇಳಿದ್ದರು. ಇದು ಅಟಲ್‌ಜೀ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net