

ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ಮಹಾರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಡನಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.
ವೈರಮುಡಿ ಜಾತ್ರಾ ಮಹೋತ್ಸವದ 7ನೇ ತಿರುನಾಳ್ ಅಂಗವಾಗಿ ಜರುಗಿದ ಮಹಾರಥೋತ್ಸವಕ್ಕೆ ಬೆಳಗ್ಗೆ 11.30ರಲ್ಲಿ ಮೇಲುಕೋಟೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು. ನಂತರ ಭಕ್ತರ ಜಯಘೋಷದೊಂದಿಗೆ ಮಾರಿಗುಡಿ ಬೀದಿ, ರಾಜಬೀದಿಗಳಲ್ಲಿ ಸಾಗಿದ ಮಹಾರಥ 1.30ರ ವೇಳೆಗೆ ರಾಜಗೋಪುರದ ಬಳಿ ತಲುಪಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಚಲುವರಾಯಸ್ವಾಮಿ ಸೇರಿದಂತೆ ಭಕ್ತರು ಮಹಾರಥಕ್ಕೆ ಪೂಜೆ ಸಲ್ಲಿಸಿದರು. ನಂತರ ವಾನಮಾಮಲೈ ಬೀದಿ ರಥದ ಬೀದಿಯಲ್ಲಿ ಸಾಗಿದ ರಥ 2.30ರ ವೇಳೆಗೆ ಸ್ವಸ್ಥಾನವಾದ ರಥದ ಮಂಟಪಕ್ಕೆ ಮರಳಿತು. ದೇವಾಲಯದ ಶ್ರೀಪಾದದವರು, ಬಂಡೀಕಾರರು, ಗ್ರಾಮದ ಯುವಕರು ಮಹಾರಥ ಸುಗಮ ಚಾಲನೆಗೆ ಶ್ರಮಿಸಿ ರಥೋತ್ಸವ ಯಶಸ್ವಿಗೊಳಿಸಿದರು.
ಮಹಾರಥೋತ್ಸವದಲ್ಲಿ ಪಾಂಡವಪುರ ಉಪವಿಬಾಗಾಧಿಕಾರಿ ಶ್ರೀನಿವಾಸ್ ತಹಸೀಲ್ದಾರ್ ಸಂತೋಷ್, ದೇವಾಲಯದ ಇಒ ಶೀಲಾ ಇದ್ದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪರಿಚಾರಕರಾದ ಎಂಎನ್ ಪಾರ್ಥಸಾರಥಿ ರಥೋತ್ಸವ ನೇತೃತ್ವ ವಹಿಸಿದ್ದರು.
ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ: ಬೆಳಗ್ಗೆ 6 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮಗಳು ಆರಂಭವಾದ ನಂತರ 8 ಗಂಟೆ ವೇಳೆಗೆ ರಥಬಲಿ ಪೂರೈಸಿ ನಂತರ ಯಾತ್ರಾದಾನ ಕೈಗೊಳ್ಳಲಾಯಿತು. ರಾಮಾನುಜಾಚಾರ್ಯರೊಂದಿಗೆ ರಾಜಮುಡಿ ಅಲಂಕಾರ ಸಹಿತ ಸ್ವಾಮಿಯ ಉತ್ಸವ ವಿಶೇಷ ಮಂಗಳವಾದ್ಯ ಹಾಗೂ ವೇದ-ಘೋಷದೊಂದಿಗೆ ರಥದ ಮಂಟಪದ ಬಳಿಗೆ ಸಾಗಿ ಮೂರು ಪ್ರದಕ್ಷಿಣೆ ಹಾಕಿ ಮುಹೂರ್ತ ಪಠಣೆಯ ನಂತರ ರಥಾರೋಹಣ ಮಾಡಲಾಯಿತು.
ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜನೆ ಮತ್ತು ಎಸ್.ಎನ್.ಯ ಸಾಂಸ್ಕೃತಿಕ ವೇದಿಕೆ ಸಹಯೋಗದ ನಾದೋಪಾಸನ ಸೇವೆಯಡಿ ವಿದ್ವಾನ್ ಆನಂದಕುಮಾರ್ ತಂಡ ನಾದಸ್ವರ ಕೈಂಕರ್ಯ ನಡೆಸಿದರು.
ಮಹಾರಥೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿ ಮೇಲುಕೊಟೆಯ ಪ್ರಮುಖ ಬೀದಿಗಳಲ್ಲಿ ರಥದರ್ಶನಕ್ಕೆ ಕಾಯುತ್ತಿದ್ದ ದೃಶ್ಯಕಂಡು ಬಂತು. ಶ್ರೀರಂಗಪಟ್ಟಣ ಡಿವೈಎಸ್ಪಿ ಶಾಂತಮಲ್ಲಪ್ಪ ಮಾರ್ಗದರ್ಶನದಲ್ಲಿ ಮೇಲುಕೋಟೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಭದ್ರತೆ ಒದಗಿದ್ದರು.
ರಥೋತ್ಸವದಲ್ಲಿ ಭಾಗಿಯಾದ ಕೆಲವುಭಕ್ತರು ನನಗೆ ಮದುವೆ ವಧು ಕರುಣಿಸು, ಸಾಲದಿಂದ ಮುಕ್ತಿ ನೀಡು, ಆರೋಗ್ಯ ಕರುಣಿಸುವ ಎಂದು ಬಾಳೆಹಣ್ಣುಗಳ ಮೇಲೆ ಬರೆದು ರಥಕ್ಕೆಸೆದು ಚೆಲುವನಾರಾಯಣಸ್ವಾಮಿಗೆ ಮೊರೆ ಇಟ್ಟರು. ಇಂದು ಬಿಸಿಲಿನ ತಾಪ ಕಡಿಮೆಯಾಗಿ ಮೋಡಕವಿದ ವಾತಾವರಣ ಇದ್ದು ಭಕ್ತರಲ್ಲಿ ಉಲ್ಲಾಸ ಮೂಡಿಸಿತ್ತು. ತೇರೆಳೆಯವ ಭಕ್ತರ ದಾಹ ತಣಿಸಲು ಯತಿರಾಜದಾಸರ್ ಗುರುಪೀಠ ಹಾಗೂ ಇತರ ಭಕ್ತರು ಮಜ್ಜಿಗೆ ಪಾನಕ ನೀಡಿದರು.