ಮಂಡ್ಯ: ಮೇಲುಕೋಟೆಯ ಚಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಏ.7 ರಂದು ನಡೆಯಲಿದೆ. ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವೈರಮುಡಿ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏ.2 ರಿಂದ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಉತ್ಸವ ನಡೆಯಲಿದೆ. ಯಾವುದೇ ಲೋಪವಿಲ್ಲದೇ ಕಾರ್ಯಕ್ರಮಗಳನ್ನು ನಡೆಸಲು ಸಮಿತಿ ರಚಿಸಿ ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗುವುದು ಎಂದರು.
ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ನೀರನ್ನು ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಬೇಕು. ಹಾಲಿ ಇರುವ ನಲ್ಲಿಗಳು, ನೀರಿನ ಟ್ಯಾಂಕ್ ಹಾಗೂ ತೊಂಬೆಗಳನ್ನು ಸ್ವಚ್ಛಗೊಳಿಸಬೇಕು. ಅವಶ್ಯವಿರುವ ಕಡೆ ಹೆಚ್ಚುವರಿ ತಾತ್ಕಾಲಿಕ ನಲ್ಲಿಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
19 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಯಂ ಆಗಿ ಸಿ.ಸಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿದ್ದು, ಸಿ.ಸಿ.ಕ್ಯಾಮೆರಾದ ನಿರ್ವಹಣೆಯನ್ನು ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಿಂದ ನಿರ್ವಹಿಸುವಂತೆ ತಿಳಿಸಿದರು.
ದೇವಾಲಯದ ಒಳ ಹಾಗೂ ಹೊರ ಆವರಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು. ಧೂಳು ನಿಯಂತ್ರಿಸಲು ಟ್ಯಾಂಕರ್ ಮೂಲಕ ನೀರು ಚಿಮುಕಿಸುವುದು. ಸ್ವಚ್ಛತೆಗಾಗಿ ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ಅಗತ್ಯವಿರುವ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕ ಶೌಚಗೃಹ ತೆರೆಯಬೇಕು. ಆರೋಗ್ಯ ಇಲಾಖೆಯಿಂದ ವೈರಮುಡಿ ಉತ್ಸವದ ದಿನದಂದು 24 ಗಂಟೆ ಕಾಲ ವೈದ್ಯರ ಕೆಲಸ ನಿರ್ವಣೆಗಾಗಿ 3 ಪಾಳಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು ಎಂದರು.
ಮೇಲುಕೋಟೆಗೆ ವಿವಿಧ ಭಾಗಗಳಿಂದ ಸಂಪರ್ಕಿಸುವ ಮುಖ್ಯರಸ್ತೆಗಳು ಹಾಗೂ ಗ್ರಾಮ ವ್ಯಾಪ್ತಿಯ ರಸ್ತೆಗಳ ದುರಸ್ತಿಯಾಗಬೇಕು. ರಸ್ತೆ ತಿರುವುಗಳು, ಹಂಪ್ ಗಳು ಇರುವ ಕಡೆಗಳಲ್ಲಿ ವೇಗಮಿತಿ ಇರುವ ಕಡೆ ಸಾಕಷ್ಟು ಸಂಖ್ಯೆಗಳಲ್ಲಿ ಸೂಚನಾ ಪಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ವೈರಮುಡಿ ಉತ್ಸವದ ದಿನದ 24 ಗಂಟೆ ಪ್ರಸಾದ ವಿನಿಯೋಗದ ವ್ಯವಸ್ಥೆಯಾಗಬೇಕು. ತಯಾರಾಗುವ ಆಹಾರವನ್ನು ಆಹಾರ ಸುರಕ್ಷತಾ ಅಧಿಕಾರಿ, ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೆ.ಎಸ್.ಆರ್.ಟಿಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.