

ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಾ.21ರಂದು ವೈರಮುಡಿ ಉತ್ಸವ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಹ್ಮೋತ್ಸವ ಮಾ.16 ರಿಂದ 26ರವರೆಗೆ ನಡೆಯಲಿದೆ. ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು, ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ಶೌಚಗೃಹದ ವ್ಯವಸ್ಥೆ ಮಾಡಬೇಕು. ವಾಹನ ಪಾರ್ಕಿಂಗ್‌ಗಾಗಿ ಸ್ಥಳ ಗುರುತಿಸಿ ಸಮತಟ್ಟು ಮಾಡಬೇಕು. ವಿದ್ಯುತ್ ದೀಪದ ವ್ಯವಸ್ಥೆ ಜತೆಗೆ ಸುಗಮ ವಾಹನ ಸಂಚಾರಕ್ಕಾಗಿ ಹಾಗೂ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದರು.
ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಬೇಕು. ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು. ದೇವಸ್ಥಾನದ ಸುತ್ತ ದೀಪಾಲಂಕಾರದ ವ್ಯವಸ್ಥೆಯಾಗಬೇಕು. ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸ್ವಾಗತ, ಆಹಾರ ಆರೋಗ್ಯ, ಸ್ವಚ್ಛತೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲಸಗಳನ್ನು ವಹಿಸಿ ಎಂದು ತಿಳಿಸಿದರು.
16ರಂದು ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, 17ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ, 18ರಂದು 1ನೇ ತಿರುನಾಳ್- ಧ್ವಜಾರೋಹಣ-ಯಾಗಶಾಲಾಪ್ರವೇಶ, 19ರಂದು 2ನೇ ತಿರುನಾಳ್ ಶೇಷವಾಹನ ಪಡೆಯೇತ್ತ, 20ರಂದು 3ನೇ ತಿರುನಾಳ್- ನಾಗವಲ್ಲಿಮಹೋತ್ಸವ, 21ರಂದು 4ನೇ ತಿರುನಾಳ್, ವೈರಮುಡಿ ಬ್ರಹ್ಮೋತ್ಸವ, 22ರಂದು 5ನೇ ತಿರುನಾಳ್-ಪ್ರಹ್ಲಾದ ಪರಿಪಾಲನ, 23 ರಂದು 6ನೇ ತಿರುನಾಳ್-ಗಜೇಂದ್ರ ಮೋಕ್ಷ, 24ರಂದು 7ನೇ ತಿರುನಾಳ್, ಮನ್ಮಹಾರೋಥೋತ್ಸವ, 25ರಂದು 8ನೇ ತಿರುನಾಳ್, ತೆಪ್ಪೋತ್ಸವ, 26ರಂದು 9ನೇ ತಿರುನಾಳ್, ಪಡಿಮಾಲೆ, 27ರಂದು 10ನೇ ತಿರುನಾಳ, ಮಹಾಭಿಷೇಕ ಮತ್ತು 28ರಂದು ಅಮ್ಮ ಹಾಗೂ ಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ, ಶೇರ್ತಿಸೇವೆ, ಕೊಡೈತಿರುನಾಳ್ ಉತ್ಸವ ನಡೆಯಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಮೇಲುಕೋಟೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಇತರರಿದ್ದರು.