

ಕೆ.ಎಂ.ದೊಡ್ಡಿ: ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಜ.10 ರಂದು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಶ್ರೀ ವೆಂಕಟೇಶ್ವರ ಸೇವಾ ಸಮಿತಿ ಅಧ್ಯಕ್ಷ ಪೂಜೂರಿ ವೆಂಕಟೇಗೌಡ ತಿಳಿಸಿದರು.
ಅಂದು ಮುಂಜಾನೆ ವೈಕುಂಠ ದ್ವಾರ ಪ್ರವೇಶದೊಂದಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯವರಿಗೆ ಅಷ್ಠಾವಧಾನ ಸೇವೆ ಮತ್ತು ಮಹಾಮಂಗಳರತಿ ಜರುಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜ.9 ರಂದು ಸಂಜೆ 6.30ಕ್ಕೆ ಶ್ರೀ ಮೂಲದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಆಭರಣ ಹಾಗೂ ಹೂವಿನ ಅಲಂಕಾರ ಜರುಗಲಿದ್ದು, ದೇವಾಲಕ್ಕೆ ತೆರಳುವ ರಸ್ತೆ
ಮತ್ತು ದೇವಾಲಯ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ಹೇಳಿದರು.ಪ್ರತಿ ವರ್ಷದಂತೆ ಶ್ರೀ ವೆಂಕಟಾದ್ರಿಗೆ ಮುಂಜಾನೆ ವಿಶೇಷ ಪೂಜೆ ನಡೆಸಿದ ಬಳಿಕ 5.30ಕ್ಕೆ ವೈಕುಂಠ ದ್ವಾರ ನಿರ್ಮಿಸುತ್ತಿದ್ದು, ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಲಕ್ಷ್ಮೀ ಸಮೇತ ವಿಷ್ಣುಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದರಿಂದ ಭಕ್ತರು ವೈಕುಂಠ ದರ್ಶನ ಭಾಗ್ಯ ಲಭಿಸಲಿದೆ ಎಂದರು.
ದೇವಾಲಯದ ಅರ್ಚಕರಾದ ಗೋಪಾಲ ಕೃಷ್ಣ ಭಟ್ಟರ್, ಅನಂತ ಕೃಷ್ಣ ಭಟ್ಟರ್, ಪುರೋಹಿತ ಯು.ವಿ.ಗಿರೀಶ್, ಅರ್ಚಕ ಬಿ.ಎಸ್. ಉದಯ್‌ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ಜರುಗಲಿದೆ. ದೇವಾಲಯಕ್ಕೆ ಸುಮಾರು 20 ರಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಲಿದ್ದು, ವಿಶೇಷವಾಗಿ ಪಂಚಕಜ್ಜಾಯ, ಹಾಲು ಮತ್ತು ಹಣ್ಣು ವಿತರಣೆ ಮಾಡಲಾಗುವುದು. ಕಜ್ಜಾಯ ತಯಾರಿಕೆ ಭರದಿಂದ ಸಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 7.30ಕ್ಕೆ ಸೋಮು ಮತ್ತು ತಂಡದವರಿಂದ ವಾದ್ಯಗೋಷ್ಠಿ, 10.30ಕ್ಕೆ ಮೈಸೂರಿನ ಸಂಜೀವಿನಿ ಭಜನಾ ಮಂಡಳಿಯ ಜಯಶಂಕರ್ ಮತ್ತು ನಿರ್ಮಲಾ ಅವರಿಂದ ಭಜನೆ ಮತ್ತು ಬೆಳಗ್ಗೆ 11.30ಕ್ಕೆ ಶಿವಾರ ಉಮೇಶ್ ತಂಡದಿಂದ ಭಕ್ತಿಗೀತಾ ಗಾಯನ ಕಾರ್ಯಕ್ರಮ ಏರ್ಪಸಲಾಗಿದೆ. ಸಂಜೆ 4 ಗಂಟೆಗೆ ಮಳವಳ್ಳಿ ಸಂಗೀತ ಶಾಲೆಯ ನಿರ್ದೇಶಕಿ ಸಿಂಧೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ಗಂಟೆಗೆ ಹರಿಕಥಾ ವಿದ್ವಾನ್ ಕಾರಸವಾಡಿ ಸಚ್ಚಿನ್ ಮತ್ತು ತಂಡದವರಿಂದ ಶ್ರೀನಿವಾಸ ಕಲ್ಯಾಣ ಹರಿಕಥೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಮಲ್ಲರಾಜು ತಂಡದವರಿಂದ ಹೆಬ್ಬೆಟ್ಟು ನಾಟಕ ಪ್ರದರ್ಶನಗೊಳ್ಳಿದೆ.ಶ್ರೀ ವೆಂಕಟೇಶ್ವರ ಸ್ವಾಮಿ ಸೇವಾ ಟ್ರಸ್ಟ್‌ನ ಕಾರ್ಯಧ್ಯಕ್ಷ ವೆಂಕಟೇಶ್, ಸದಸ್ಯರಾದ ದೇವರಹಳ್ಳಿ ವೆಂಕಟೇಶ್, ಶೀನಕೆಂಚೇಗೌಡ, ಗುಡಿಗೆರೆ ಮೈಕಸೆಟ್ ಬಸವರಾಜು, ರವಿ, ವಿಶ್ವ, ಜವರಣ್ಣ ಇದ್ದರು.