ವೈಕುಂಠ ಏಕಾದಶಿ: ಶರವಣ ಟ್ರಸ್ಟ್‌ನಿಂದ ಒಂದು ಲಕ್ಷ ಲಡ್ಡು ವಿತರಣೆ

Laddu
Published on

ಬೆಂಗಳೂರು ವೈಕುಂಠ ಏಕಾದಶಿ ಅಂಗವಾಗಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಒಂದು ಲಕ್ಷ ಲಡ್ಡುಗಳನ್ನು ನಗರದಲ್ಲಿರುವ ವಿವಿಧ ವೆಂಕಟೇಶ್ವರ ದೇವಾಲಯಗಳಿಗೆ ವಿತರಣೆ ಮಾಡಲಾಗುತ್ತಿದೆ.

ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಟಿ.ಎ. ಶರವಣ ಗುರುವಾರ ಡಿವಿಜಿ ರಸ್ತೆಯಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ಪೂಜೆ ನೆರವೇರಿಸಿ ಲಡ್ಡು ವಿತರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವೈಕುಂಠ ಏಕಾದಶಿ ವಿಶೇಷ ದಿನಕ್ಕಾಗಿ ಕಳೆದ 10 ವರ್ಷಗಳಿಂದ ಲಡ್ಡುಗಳನ್ನು ನಗರದಲ್ಲಿರುವ ದೇವಾಲಯಳಿಗೆ ವಿತರಣೆ ಮಾಡಲಾಗುತ್ತದೆ. ಈ ವರ್ಷ ಒಂದು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದ್ದು, 200ಕ್ಕೂ ಹೆಚ್ಚಿನ ದೇವಸ್ಥಾನ ಆಡಳಿತ ಮಂಡಳಿಗಳು ಲಡ್ಡು ಪ್ರಸಾದ ವಿತರಿಸುವಂತೆ ಮನವಿ ಮಾಡಿವೆ. ಶುಕ್ರವಾರ ದೇವಾಲಯಗಳಿಗೆ ವಿತರಣೆ ಮಾಡಲಾಗುತ್ತದೆ. ಶನಿವಾರ ಬೆಳಗ್ಗೆಯಿಂದಲೇ ವೈಕುಂಠ ಏಕಾದಶಿಯಂದು ವಿಶೇಷ ದರ್ಶನ ಪಡೆಯುವ ಭಕ್ತಾದಿಗಳಿಗೆ ಲಡ್ಡು ನೀಡಲಾಗುತ್ತದೆ ಎಂದು ತಿಳಿಸಿದರು.

ಏಕಾದಶಿಯಂದು ವಿಷ್ಣುವಿನ ವೈಕುಂಠ ಮಹಾದ್ವಾರ ತೆರೆಯಲಿದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಈ ದಿನ ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆಯಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ, ದರ್ಶನ ಎಲ್ಲ ಭಕ್ತಾದಿಗಳಿಗೂ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶುದ್ಧ ತುಪ್ಪ. ಗೋಡಂಬಿ, ದ್ರಾಕ್ಷಿ, ಕಡಲೆಬೇಳೆ ಬಳಿಸಿ ತಿರುಪತಿ ಲಡ್ಡು ಮಾದರಿಯಲ್ಲಿ 100 ಬಾಣಸಿಗರ ತಂಡವು ಹಗಲುರಾತ್ರಿ ಶ್ರಮಿಸಿ ಒಂದು ಲಕ್ಷ ಲಡ್ಡುಗಳನ್ನು ತಯಾರಿಸಿದೆ ಎಂದು ಹೇಳಿದರು.

ಕರೊನಾ ಸಾಂಕ್ರಾಮಿಕ ಮತ್ತೆ ತನ್ನ ಆರ್ಭಟ ತೋರಿಸುತ್ತಿದೆ ಎಂಬ ವರದಿಗಳಾಗುತ್ತಿವೆ. ಆತಂಕ ದೂರವಾಗಿ ರೋಗ ರುಜಿನಗಳು ಬಾರದಿರಲಿ. ನಾಡಿನ ಸಮಸ್ತ ಜನರಿಗೆ ಸುಖ-ಶಾಂತಿಯಿಂದ ನೆಮ್ಮದಿ ನೆಲಸುವಂತಾಗಲಿ ಎಂದು ದೇವರಲ್ಲಿ ಶರವಣ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net