ನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ

1
Published on

ಮೈಸೂರು: ವೈಕುಂಠ ಏಕಾದಶಿ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವಿಷ್ಣು ತನ್ನ ಅವತಾರ ಸಮಾಪ್ತಿಗೊಳಿಸಿ ವೈಕುಂಠಕ್ಕೆ ಹೋಗುವ ದಿನವನ್ನು ವೈಕುಂಠ ಏಕಾದಶಿಯಾಗಿ ಆಚರಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ನಾರಾಯಣನ ದರ್ಶನ ಪಡೆದು, ವೈಕುಂಠ ದ್ವಾರದ ಮೂಲಕ ಹೊರಬಂದರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಆಸ್ತಿಕರದು. ಅಂತೆಯೆ, ನಗರದ ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಹೂಗಳಿಂದ ಸ್ವರ್ಗದ ಬಾಗಿಲು ನಿರ್ಮಿಸಲಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು ಸ್ವರ್ಗದ ಬಾಗಿಲ ಮೂಲಕ ದೇವರ ದರ್ಶನ ಪಡೆದರು.

ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ನಾನಾ ಪೂಜಾ ಕಾರ್ಯಕ್ರಮ ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಮುಂಜಾನೆ 5.30 ರಿಂದಲೇ ದೇವಾಲಯಕ್ಕೆ ಪ್ರವೇಶಾವಕಾಶ ಕಲ್ಪಿಸಲಾಯಿತು. ಭಕ್ತರು ಭಾರಿ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವೈಕುಂಠ ದ್ವಾರದ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿಶೇಷ ಅಲಂಕಾರದೊಂದಿಗೆ ಯೋಗಾನರಸಿಂಹಸ್ವಾಮಿ ಕಂಗೊಳಿಸಿತು. ದೇವಸ್ಥಾನ ಸಂಸ್ಥಾಪಕ ಪ್ರೊ.ಭಾಷ್ಯಂಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ವಿಜಯನಗರ, ಹೂಟಗಳ್ಳಿ, ಕೂರ್ಗಳ್ಳಿ, ಹಿನಕಲ್ ಸೇರಿಂದತೆ ನಗರದ ಬಹುತೇಕ ಬಡಾವಣೆಗಳ ಭಕ್ತರು ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net