

ಮೈಸೂರು: ವೈಕುಂಠ ಏಕಾದಶಿ ಸಂಭ್ರಮ ಸೋಮವಾರ ನಗರದ ವಿವಿಧೆಡೆ ಕಳೆಗಟ್ಟಿತ್ತು. ಭಕ್ತರು ಭಕ್ತಿ ಭಾವದಿಂದ ಆಚರಿಸಿದರು.
ಈ ದಿನ ವೈಕುಂಠದ (ಸ್ವರ್ಗ ಅಥವಾ ವಿಷ್ಣು ಲೋಕದ) ಬಾಗಿಲು ತೆರೆದಿರುತ್ತದೆಂದು ಪ್ರತೀತಿ ಇದೆ. ಅಂದು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ದರ್ಶನ ಪಡೆಯಲು ಭಕ್ತರು ಭಾರಿ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.
ನಗರದ ವೆಂಕಟರಮಣ, ವೆಂಕಟಾಚಲಪತಿ ದೇವಸ್ಥಾನ ಹಾಗೂ ಸಚ್ಚಿದಾನಂದ ಗಣಪತಿ ಆಶ್ರಮಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ವಿವಿಧ ದೇವಸ್ಥಾನಗಳಲ್ಲೂ ದೇವರ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನಡೆದವು.
ದೇವಸ್ಥಾನಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದೇಗುಲಗಳಲ್ಲಿ ವೆಂಕಟರಮಣನ ಸ್ಮರಣೆ ಮೊಳಗಿತು. ವೆಂಕಟರಮಣನ ಕುರಿತು ಕೀರ್ತನೆ, ದೇವರನಾಮ ಗಾಯನ ಗುನುಗಿದವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕೆಲವರು ದಿನವಿಡೀ ಉಪವಾಸವಿದ್ದು ವ್ರತಾಚರಣೆ ನಡೆಸಿದರು. ವಿವಿಧ ಮಂತ್ರ ಘೋಷಗಳ ನಡುವೆ ಸಾಮೂಹಿಕ ಪ್ರಾರ್ಥನೆ ಜರುಗಿತು. ಬಹುತೇಕ ದೇವಸ್ಥಾನದಲ್ಲಿ ಲಾಡು, ಇತರೆ ಪ್ರಸಾದಗಳನ್ನು ವಿತರಿಸಲಾಯಿತು.
ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ಮುಂಜಾನೆ 4 ರಿಂದಲೇ ದೇವಾಲಯಕ್ಕೆ ಪ್ರವೇಶಾವಕಾಶ ಕಲ್ಪಿಸಲಾಯಿತು.
ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ವಿಶೇಷ ಅಲಂಕಾರದೊಂದಿಗೆ ಯೋಗಾನರಸಿಂಹಸ್ವಾಮಿ ಕಂಗೊಳಿಸಿತು. ಜಯನಗರದ ಇಸ್ಕಾನ್ ದೇವಸ್ಥಾನದಲ್ಲಿ ನಿರ್ಮಿಸಿದ್ದ ವಿಶಿಷ್ಟವಾದ ವೈಕುಂಠ ದ್ವಾರವನ್ನು ಬೆಳಗ್ಗೆ 6.30ಕ್ಕೆ ತೆರೆಯಲಾಯಿತು. ಬಳಿಕ ವಿಶೇಷ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಯಿತು. ಬಳಿಕ ಶ್ರೀಕೃಷ್ಣನಾಮ ಸ್ಮರಣೆ ಮಾಡುವ ಲಕ್ಷಾರ್ಚನೆ ಸೇವೆ ನಡೆಯಿತು. ಮಧ್ಯಾಹ್ನದಿಂದ ರಾತ್ರಿವರೆಗೆ ನಡೆದ ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಿದವು.
ನರಸಿಂಹರಾಜ ಮೊಹಲ್ಲಾದ ಶಿವಾಜಿ ರಸ್ತೆಯ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವೈಕುಂಠ ದ್ವಾರ ಪೂಜೆ ನೆರವೇರಿತು. ಊಟಿ ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಉತ್ತರ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ವಿಶೇಷ ಪೂಜೆ ನಡೆದವು.
ಕೋಟೆ ಆಂಜನೇಯಸ್ವಾಮಿ, ಟಿ.ಕೆ.ಲೇಔಟ್‌ನಲ್ಲಿರುವ ಮಾರುತಿ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು. ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲೂ ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲದೆ ಶ್ರೀರಾಮ ಮಂದಿರವನ್ನು ಅಲಂಕರಿಸಿ ವಿಶೇಷ ಪೂಜೆ ಮಾಡಲಾಯಿತು.