ಜಿಲ್ಲಾದ್ಯಂತ ವೈಕುಂಠ ಏಕಾದಶಿ ಸಂಭ್ರಮ

Published on

ಬಳ್ಳಾರಿ : ವೈಕುಂಠ ಏಕಾದಶಿ ಹಿನ್ನೆಲೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಶುಕ್ರವಾರ ಜರುಗಿದವು. ಚಳಿಯನ್ನು ಲೆಕ್ಕಿಸದೆ ಭಕ್ತರು ಮುಂಜಾನೆಯಿಂದಲೇ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಇಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಚಿನ್ನಭರಣಗಳಿಂದ ಆಲಂಕರಿಸಿ ವಿವಿಧ ಪುಷ್ಪಗಳಿಂದ ಸಿಂಗರಗೊಳಿಸಿ ಪೂಜೆ ನೆರವೇರಿಸಿದರು. ಸೂರ್ಯೊದಯಕ್ಕೂ ಮುನ್ನವೇ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಳಗ್ಗೆ 6ಕ್ಕೆ ವೈಕುಂಠ ದ್ವಾರಸೇವೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ, ವಿವಿಧ ಭಜನಾ ಮಂಡಳಿಯಿಂದ ಕಾರ್ಯಕ್ರಮಗಳು ನಡೆದವು.

ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಎಲ್ಲೆಡೆ ಭಕ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಹಬ್ಬದ ವಾತಾವರಣ ಕಂಡುಬಂತು. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ದೇವಸ್ಥಾನ ಮಂಡಳಿ ಸರತಿ ಸಾಲು ಮತ್ತು ಶಾಮಿಯಾನದ ವ್ಯವಸ್ಥೆ ಮಾಡಿದ್ದರು. ಯಾವುದೇ ನೂಕುನುಗ್ಗಲು ಅಥವಾ ಗಲಾಟೆ ಉಂಟಾಗದಂತೆ ಮುನ್ನಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಕನಕದುರ್ಗಮ್ಮ ದೇವಸ್ಥಾನ, ಕೋಟೆ ಮಲ್ಲೇಶ್ವರ ದೇವಸ್ಥಾನ, ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿಯೂ ಸಹ ವಿಶೇಷ ಪೂಜೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net