

ಚಾಮರಾಜನಗರ: ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ಜಿಲ್ಲೆಯ ವೈಷ್ಣವ ದೇವಸ್ಥಾನಗಳಲ್ಲಿ ದೇವರಿಗೆ ವಿವಿಧ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರಿದವು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿರುವ ವೈಷ್ಣವ ದೇವಸ್ಥಾನಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ದೇವರಿಗೆ ವಿವಿಧ ಅಭಿಷೇಕ, ಹೂವಿನ ಅಲಂಕಾರ, ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗೆಯಿಂದಲೇ ತಮ್ಮ ಸಮೀಪದ ವೈಷ್ಣವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥಗಳನ್ನು ಬೇಡಿಕೊಂಡರು. ಕೆಲವು ದೇವಸ್ಥಾನಗಳಲ್ಲಿ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಚಾಮರಾಜನಗರ ವರದಿ: ನಗರ ಸೇರಿದಂತೆ ತಾಲೂಕಿನ ವಿವಿಧ ವೈಷ್ಣವ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ನಗರದ ಶ್ರೀದೇವಿ ಭೂದೇವಿ ಸಮೇತ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಾರಾಯಣಸ್ವಾಮಿಯ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಮೆರವಣಿಗೆ ಮಾಡಲಾಯಿತು.
ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನಾರಾಯಣಸ್ವಾಮಿಯ ದರ್ಶನ ಪಡೆದರು. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯದ್ವಾರದಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಲಾಗಿತ್ತು. ಭಕ್ತರು ವೈಕುಂಠ ದ್ವಾರದ ಮೂಲಕ ತೆರಳಿ ದೇವರ ದರ್ಶನ ಪಡೆದರು.
ಪೂಜಾ ಕಾರ್ಯದಲ್ಲಿ ದೇವಸ್ಥಾನದ ಅರ್ಚಕ ರಾಮಚಂದ್ರ ಮಾರುತಿ, ರಾಘವೇಂದ್ರಸ್ವಾಮಿ ಮಠದ ಶ್ರೀಧರಾಚಾರ್, ಸತಿಶ್‌ಕುಮಾರ್, ಪ್ರಶಾಂತ್, ಡಾ.ಬಾಲಸುಬ್ರಮಣ್ಯಂ, ನವೀನ್, ಶ್ರೀನಿಧಿ ಇತರರು ಪಾಲ್ಗೊಂಡಿದ್ದರು.