

ಮಂಡ್ಯ: ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ ಜಿಲ್ಲಾದ್ಯಂತ ವಿಷ್ಣು ಮತ್ತು ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ಇಷ್ಟಾರ್ಥ ಸಿದ್ಧಿಗೆ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ವೈಕುಂಠ ದ್ವಾರ ಪ್ರವೇಶಿಸಿದರು.
ನಗರದ ಲಕ್ಷ್ಮೀಜನಾರ್ದನಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರ, ಶ್ರೀನಿವಾಸ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ತಾಲೂಕಿನ ಸಾತನೂರು ಕಂಬದ ನರಸಿಂಹಸ್ವಾಮಿ, ಕಿರಗಂದೂರು ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ವಿವಿಧೆಡೆ ಭಕ್ತರಿಗೆ ಲಾಡು, ಅವಲಕ್ಕಿ ಪ್ರಸಾದ ವಿತರಿಸಲಾಯಿತು.
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿರುವ ಕೇಶುನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ಧಿ ಈಡೇರಲಿ ಎಂದು ಪ್ರಾರ್ಥಿಸಿದರು. ವಿನಾಯಕ ಗೆಳೆಯರ ಬಳಗದಿಂದ 8ನೇ ವರ್ಷದ ಪೂಜಾ ಮಹೋತ್ಸವದ ಅಂಗವಾಗಿ ವೈಕುಂಠ ಏಕಾದಶಿ ಮುನ್ನಾ ದಿನವಾದ ಭಾನುವಾರ ಹೋಮ-ಹವನ ನೆರವೇರಿಸಲಾಯಿತು. ಭಕ್ತರಿಗೆ ಲಾಡು ವಿತರಿಸಲಾಯಿತು. ಬಳಗದ ಪದಾಧಿಕಾರಿಗಳಾದ ನವೀನ್‌ಗೌಡ, ಯಶ್ವಂತ್, ಉಮೇಶ್, ಶಿವಲಿಂಗ, ನವೀನ್, ಚಲುವರಾಜು, ನಾಗೇಶ್ ಇತರರಿದ್ದರು. ಅಂತೆಯೇ ವೈಕುಂಠ ಏಕಾದಶಿ ಪ್ರಯುಕ್ತ ಬಸರಾಳು ಗ್ರಾಮದ ಕಟ್ಟೆ ತಿಮ್ಮಪ್ಪನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ತಿಮ್ಮಪ್ಪನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ವೈಕುಂಠ ದ್ವಾರ ಪ್ರವೇಶ: ಸಾತನೂರಿನ ಕಂಬದನರಸಿಂಹಸ್ವಾಮಿ ದೇವಸ್ಥಾನ, ಮಂಡ್ಯ ನಗರದ ಲಕ್ಷ್ಮೀಜನಾರ್ದನಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಲಕ್ಷ್ಮೀವೆಂಕಟೇಶ್ವರ ಸೇರಿದಂತೆ ಇನ್ನೂ ಹಲವು ದೇವಾಲಯಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠ ದ್ವಾರ ಪ್ರವೇಶಿಸಿದರು.