ಕವಿತಾ, ರವಿಶಂಕರಗೆ ವೈದ್ಯಶ್ರೀ ಪ್ರಶಸ್ತಿ

22 vikram 1 (kavitha evor)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯಕಿಯ ಕ್ಷೇತ್ರದಲ್ಲಿ ಶ್ರಮಿಸಿದ ವೈದ್ಯರಿಗೆ ಕಲಾ ಸ್ಪಂದನ ಸಂಸ್ಥೆ ವತಿಯಿಂದ ನೀಡುವ ಪ್ರಸಕ್ತ ಸಾಲಿನ ವೈದ್ಯಶ್ರೀ ಪ್ರಶಸ್ತಿಗೆ ಹುಬ್ಬಳ್ಳಿಯ ಕಿಮ್ಸ್​ ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಏವೂರ ಮತ್ತು ಪುತ್ತೂರಿನ ಸುಶ್ರುತಾ ಆಯುರ್ವೇದ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ರವಿಶಂಕರ ಪರ್ವಾಜೆ ಭಾಜನರಾಗಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್​ ತಾಲೂಕಿನ ಹಿರೇಬಾಸೂರ ಗ್ರಾಮದ ಮೌನೇಶಪ್ಪ ಕತ್ತಿ ಅವರ ಮಕ್ಕಳು 2019ರಿಂದ ಪ್ರಶಸ್ತಿ ಸ್ಥಾಪಿಸಿದ್ದಾರೆ. ಪ್ರಶಸ್ತಿಯು 25,000 ಸಾವಿರ ನಗದು, ಪ್ರಮಾಣಪತ್ರ, ಫಲಕ ಒಳಗೊಂಡಿದೆ. ವೈದ್ಯರ ಸೇವೆ ಪರಿಗಣಿಸಿ ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.
ಹುಬ್ಬಳ್ಳಿಯ ಕಿಮ್ಸ್​ ಪ್ಯಾಥಾಲಜಿ ವಿಭಾಗದ ಸಹ ಪ್ರಾಧ್ಯಾಪಕಿ ಮತ್ತು ರಕ್ತ ನಿಧಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕವಿತಾ ಏವೂರ ಅವರು ಕೋವಿಡ್​ ಸಮಯದಲ್ಲಿ ಪ್ಲಾಸ್ಮಾಥೆರಪಿ ಚಿಕಿತ್ಸೆಯ ಕಾರ್ಯ ಮತ್ತು ಸುಧಾರಿತ ರಕ್ತ ಹೊಂದಾಣಿಕೆ ವಿಧಾನದ ಉನ್ನತಿಕರಣದ ಸಾಧನೆ ಹಾಗೂ ಬಡ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶನ, ಲೈಂಗಿಕ ಕಾರ್ಯಕರ್ತರಿಗೆ ಜಾಗೃತ ಶಿಬಿರ ನಡೆಸಿದ್ದಲ್ಲದೆ, ಅನೇಕ ಸೇವೆಗಳನ್ನು ನೀಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಡಾ. ರವಿಶಂಕರ ಪರ್ವಾಜೆ ನಿತ್ಯ ಸಾವಿರಾರು ಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾರೆ. ಭಾರತೀಯ ಆಯುರ್ವೇದ ಪದ್ಧತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಬದುಕುವ ಕಲೆಗಳ ಬಗ್ಗೆ ಶಿಬಿರ ಆಯೋಜನೆ ಮಾಡುತ್ತಿದ್ದಾರೆ. ಇವರ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಬ್ಬರಿಗೂ ತಲಾ 12500 ರೂ. ನಗದು, ಫಲಕ, ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಆಯ್ಕೆ ಸಮಿತಿ ಅಧ್ಯಕ್ಷ ಡಾ. ಸತ್ಯನಾರಾಯಣ ಮಾಸ್ತಮ್ಮನವರ, ನಾರ್ಥ ಬೆಂಗಳೂರು ಹಾಸ್ಪಿಟಲ್​ ನಿರ್ದೇಶಕ ಡಾ. ಶಿವಕುಮಾರ ಉಪ್ಪಳ, ಗದಗದ ಸಂಕನೂರ ಆಸ್ಪತ್ರೆಯ ಡಾ. ಶ್ವೇತಾ ಸಂಕನೂರ, ಮಂಜುನಾಥ ಎಂ.ಕೆ. ಸದಸ್ಯರ ತಂಡ ಈ ಆಯ್ಕೆ ಮಾಡಿದೆ ಎಂದು ಪ್ರಶಸ್ತಿ ಸಂಸ್ಥಾಪಕ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net