

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ವಹ್ನಿಕುಲ ತಿಗಳ ಸಮುದಾಯವು ರಾಜ್ಯದ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದ್ದು, ರಾಜ್ಯದಲ್ಲಿ ಸುಮಾರು 40 ಲಕ್ಷ ಮಂದಿ ಜನಸಂಖ್ಯೆ ಇದೆ. ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ನಗರದ ಎಚ್‌ಜೆಎಸ್‌ಎಸ್ ಸಭಾಭವನದಲ್ಲಿ ವಹ್ನಿಕುಲ ತಿಗಳ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ವೈಯಕ್ತಿಕ ಹಾಗೂ ರಾಜಕೀಯ ಜೀವನದಲ್ಲಿ ವಹ್ನಿಕುಲ ತಿಗಳ ಸಮುದಾಯ ಹೃದಯಕ್ಕೆ ಹತ್ತಿರವಾಗಿದ್ದು, ಅವರೊಂದಿಗೆ ಸಾಕಷ್ಟು ಬಾಂಧವ್ಯ ಹೊಂದಿದ್ದೇನೆ. ದ್ರೌಪದಮ್ಮ ದೇವಿ ಕರಗ ಮಹೋತ್ಸವ ಆಚರಣೆ ಮಾಡುವ ಏಕೈಕ ಸಮುದಾಯ ಇದಾಗಿದ್ದು, ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇವರು ಶ್ರಮ ಜೀವಿಗಳಾಗಿದ್ದಾರೆ. ಆದ್ದರಿಂದ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ದಾಪುಗಾಲನ್ನ ಇಡಬೇಕು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಪೂರ್ವಜರ ಕಾಲದಲ್ಲಿ ಚಾತುವರ್ಣ ವ್ಯವಸ್ಥೆಯಲ್ಲಿ ಮೇಲ್ವರ್ಗದ ಜಾತಿಗಳಿಗೆ ಗುರುಗಳ ಆಶೀರ್ವಾದ ಸಿಗುತ್ತಿತ್ತು. ಶೂದ್ರರಿಗೆ ಯಾವುದೇ ಗುರುಗಳ ಮಾರ್ಗದರ್ಶನ ಸಿಗುತ್ತಿರಲಿಲ್ಲ. ಆದರೆ, ವಹ್ನಿಕುಲ ತಿಗಳ ಸಮುದಾಯ ಮಠವನ್ನು ಸ್ಥಾಪಿಸಿ ಮಕ್ಕಳಿಗೆ ಮಾರ್ಗದರ್ಶನ ಹಾಗೂ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕಿನಲ್ಲಿಯೇ ವಹ್ನಿಕುಲ ತಿಗಳ ಸಮುದಾಯದ ಮಠಕ್ಕೆ ಜಾಗ ಒದಗಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಮಣಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀನಿವಾಸ್, ಸಿಡಿಪಿಒ ಶಿವಮ್ಮ, ಮುಖಂಡರಾದ ರಾಕೇಶ್,ಶ್ರೀನಿವಾಸ್, ಮೋಹನ್, ಅರುಣ್ ಕುಮಾರ್, ಕೃಷ್ಣಪ್ಪ, ಗಣಾಚಾರಿ ಶ್ರೀಧರ್, ಮರಿಯಪ್ಪ ಇದ್ದರು.
ವಹ್ನಿಕುಲ ತಿಗಳ ಸಮುದಾಯದಿಂದ ರಾಜ್ಯಾದ್ಯಂತ 147 ಕಡೆ, ಹೊಸಕೋಟೆ ತಾಲೂಕಿನಲ್ಲಿಯೇ 19 ಕಡೆಗಳಲ್ಲಿ ಕರಗ ಮಹೋತ್ಸವ ಆಚರಿಸಲಾಗುತ್ತದೆ. 2017ರಲ್ಲಿ ಕರಗ ಮಹೋತ್ಸವಕ್ಕೆ ಸರ್ಕಾರದಿಂದ ಅನುದಾನವನ್ನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದರಿಂದ ಉತಸವ ಮಾಡಲು ಸರ್ಕಾರದಿಂದ ಅನುದಾನ ಬರುತ್ತಿದೆ. ಪ್ರಮುಖವಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಸಮಾಜದ ಉನ್ನತ ಹುದ್ದೆಗಳಿಗೆ ಹೋಗಬೇಕಾಗಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಪಾಲಕರು ಆಸ್ತಿ ಸಂಪಾದನೆ ಮಾಡುವ ಬದಲು ವಿದ್ಯೆ ಎಂಬ ಆಸ್ತಿಯನ್ನು ಧಾರೆ ಎರೆದರೆ ಅವರು ಸಮಾಜಕ್ಕೆ ಆಸ್ತಿಗಳಾಗುತ್ತಾರೆ.ಪಿ.ಆರ್.ರಮೇಶ್ ಮಾಜಿ ಎಂಎಲ್ಸಿ ಮನುಷ್ಯನಿಗೆ ಹುಟ್ಟು ನಿಶ್ಚಿತ, ಸಾವು ಖಚಿತ. ಆದರೆ, ಜೀವಿತಾವಧಿಯಲ್ಲಿ ಮಾಡಿರುವ ಒಳ್ಳೆ ಕೆಲಸಗಳು ಹಾಗೂ ಶ್ರಮವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಆದ್ದರಿಂದ ಸಮಾಜದಲ್ಲಿ ಸುಶಿಕ್ಷಿತರಾಗಿ ಸಂಸ್ಕಾರವಂತರಾಗಿ ಬದುಕಬೇಕು. ಆಗ ಮಾತ್ರ ಮನುಷ್ಯ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ.ಶ್ರೀ ಪ್ರಣಾವಾನಂದ ಪುರಿ ಸ್ವಾಮೀಜಿಶಿವನಾಪುರ ಆದಿಶಕ್ತಿ ಮಹಾಸಂಸ್ಥಾನ ಮಠ.