

ಮಂಗಳೂರು: ತುಳುನಾಡಿನ ಸಂಸ್ಕೃತಿಗೆ ಭದ್ರ ಅಡಿಪಾಯ ಹಾಕುವಲ್ಲಿ ವಾದ್ಯ ಕಲಾ ಮೇಳದ ಪಾತ್ರ ಮಹತ್ತರ. ಅವರಿಗೆ ಸರ್ಕಾರದಿಂದ ಗರಿಷ್ಠ ಪ್ರೋತ್ಸಾಹ ಸಿಗಬೇಕು ಎಂದು ಚಿತ್ರನಟ ರಾಜ್ ಬಿ ಶೆಟ್ಟಿ ಹೇಳಿದರು.
ಅವರು ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ಭಾನುವಾರ ನಗರದ ಉರ್ವ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ವಾದ್ಯ ಕಲಾ ಮೇಳವನ್ನು ತಾಸೆ ಬಡಿಯುವ ಉದ್ಘಾಟಿಸಿ ಮಾತನಾಡಿದರು.
ದೈವಚಾಕರಿಗೆ ಅಕ್ಕಿ, ತೆಂಗಿನ ಕಾಯಿ ಮಾತ್ರ ಪಡೆದುಕೊಂಡು ದೈವರ ಮೇಲೆ ನಿಷ್ಠೆ ತೋರಿಸಿದ ಅವರ ಕುರಿತು ಸದಾ ಕಾಲ ಎಲ್ಲರೂ ಹೆಮ್ಮೆ ಪಡಬೇಕು. ಅವರ ಮಕ್ಕಳು ಇಂತಹ ವಾದ್ಯ ಕಲೆಯನ್ನು ಕಲಿಯಲು ಪ್ರೇರಣೆ ಸಿಗಬೇಕಾದರೆ ಮಾಜ, ಸರ್ಕಾರ ಇಂತಹ ದೈವದ ಚಾಕರಿ, ನರ್ತಕ, ವಾದ್ಯಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುವ ಅಗತ್ಯವಿದೆ ಎಂದರು.
ಶ್ರೀಕ್ಷೇತ್ರ ಕಚ್ಚೂರು ಇದರ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರ ಈಗಾಗಲೇ ವಿವಿಧ ಕಲಾವಿದರಿಗೆ ಮಾಸಾಶನ ನೀಡುವ ಕೆಲಸ ಮಾಡಿದೆ. ಆದರೆ ವಾದ್ಯಕಲಾವಿದರಿಗೂ ಮಾಸಾಶನ ನೀಡುವ ಕೆಲಸವನ್ನು ಮಾಡಬೇಕು ಇದಕ್ಕಾಗಿ ಸಂಘಟನೆ ಪ್ರಯತ್ನ ಪಡಬೇಕು. ಮಾಸಾಶನದ ಮೂಲಕ ಅವರಿಗೊಂದು ಆರ್ಥಿಕ ಭದ್ರತೆ ಸಿಗುತ್ತದೆ ಎಂದರು.
ನೂರು ವರ್ಷಗಳ ಹಿಂದೆ ತಳ ಸಮುದಾಯದವರ ಮನೆ ಬಾಗಿಲಿಗೆ ಬ್ಯಾಂಡ್ ವಾದ್ಯಗಳನ್ನು ಇತರ ಸಮುದಾಯದವರು ಮಾಡಲು ಅವಕಾಶ ಇರಲಿಲ್ಲ. ಆದರೆ ಇದೇ ವಿಚಾರದಿಂದ ಸ್ವಾಭಿಮಾನಿಗಳಾದ ತಳಸಮುದಾಯದವರು ವಾದ್ಯಗಳನ್ನು ನುಡಿಸಲು ಕಲಿತುಕೊಂಡರು. ನೋವಿನಿಂದ ಬಂದ ಈ ಕಲೆಯನ್ನು ಅವರು ನೆಚ್ಚಿಕೊಂಡು ಇಂದು ದೈವಾರಾಧನೆ, ನಾಗರಾಧನೆ ಸೇರಿದಂತೆ ಮುಜರಾಯಿ ದೇವಸ್ಥಾನಗಳಲ್ಲಿ ವಾದ್ಯಗಳನ್ನು ನುಡಿಸುತ್ತಾರೆ ಎಂದರು.
ಮನಪಾ ಸದಸ್ಯ ಭಾಸ್ಕರ ಮೊಯ್ಲಿ, ನಮ್ಮ ಕುಡ್ಲದ ವ್ಯವಸ್ಥಾಪಕ ಲೀಲಾಕ್ಷ ಕರ್ಕೆರಾ, ಮಂಗಳೂರು ಕಂಬಳ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ‌್ಯದರ್ಶಿ ಕಸ್ತೂರಿ ಪಂಜ, ಬಾಲಕೃಷ್ಣ ರೈ ಬಾಂದೊಟ್ಟುಗುತ್ತು, ಲೋಕನಾಥ ಮಾರ್ಲ, ರಂಗನಾಥ ಎ., ಚಂದ್ರಶೇಖರ ವಾಮಂಜೂರು, ಕೃಷ್ಣ ಎಸ್ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಕೆ.ಕೆ. ಪೇಜಾವರ ಪ್ರಸ್ತಾವಿಕವಾಗಿ ಮಾತನಾಡಿದರು. ವಾದ್ಯ ಕಲಾ ಮೇಳದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಸ್ವಾಗತಿಸಿದರು. ರೋಹಿತ್ ಉಳ್ಳಾಲ ಹಾಗೂ ದಯಾನಂದ ಕತ್ತಲ್‌ಸಾರ್ ಕಾರ‌್ಯಕ್ರಮ ನಿರೂಪಿಸಿದರು. ವಾದ್ಯಕಲಾ ಸೇರಿದಂತೆ ದೈವದ ಚಾಕರಿ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಸಭಾ ಕಾರ‌್ಯಕ್ರಮದ ಮೊದಲು ಮಂಗಳಾ ಕ್ರೀಡಾಂಗಣದಿಂದ ಉರ್ವದ ಡಾ. ಅಂಬೇಡ್ಕರ್ ಭವನದ ತನಕ ಆಕರ್ಷಕ ವಾದ್ಯಮೇಳದ ಮೆರವಣಿಗೆ ನಡೆಯಿತು. ಸಭಾ ಕಾರ‌್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ‌್ಯಕ್ರಮಗಳು ಸಾಗಿತು.