ಘನತ್ಯಾಜ್ಯ ಬೆಂಕಿ ನಂದಿಸಲು ಹರಸಾಹಸ

12 CHN
Published on

ಚನ್ನಗಿರಿ: ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಬಳಿ ಪುರಸಭೆ ವತಿಯಿಂದ ನಿರ್ವಿುಸಲಾದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೋಮವಾರ ಬೆಂಕಿ ತಗುಲಿ ತ್ಯಾಜ್ಯವಸ್ತುಗಳು ಸುಟ್ಟು, ಸುತ್ತಲಿನ ಪ್ರದೇಶದಲ್ಲಿ ಹೊಗೆ ಆವರಿಸಿದೆ. ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ.

ಘಟಕದ ಸುತ್ತ ಜಮೀನುಗಳಿವೆ. ರೈತರು ಹೊಲದಲ್ಲಿರುವ ಕಸ ಸುಡಲು ಬೆಂಕಿ ಹಾಕಿದ್ದು, ಗಾಳಿಯಿಂದ ಬೆಂಕಿ ಕಿಡಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಿದ್ದಿದೆ. ಇದರಿಂದ ತ್ಯಾಜ್ಯ ವಸ್ತುಗಳು ಹೊತ್ತಿ ಉರಿದಿವೆ. ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದು, ಪುರಸಭೆಯವರಿಂದ ಬೆಂಕಿ ಆರಿಸಲಾಗುತ್ತಿಲ್ಲ.

ಪಟ್ಟಣದಲ್ಲಿ ಒಟ್ಟು 23 ವಾರ್ಡ್​ಗಳಿದ್ದು, ಪುರಸಭೆಯವರು ಹಸಿ ಮತ್ತು ಒಣಕಸ ಸಂಗ್ರಹಿಸಿ ವಿಲೇವಾರಿ ಘಟಕದಲ್ಲಿ ಹಾಕುತ್ತಾರೆ. ಪ್ರತಿದಿನ 80 ರಿಂದ 100 ಟನ್​ವರೆಗೆ ಕಸ ಸಂಗ್ರಹವಾಗುತ್ತದೆ. ಆದರೆ ಇದನ್ನು ವಿಲೇವಾರಿ ಮಾಡುವ ಕಾರ್ಯ ಪುರಸಭೆಯವರು ಮಾಡುತ್ತಿಲ್ಲ. ಗೊಬ್ಬರ ಎಂದು ತುಂಬಿಕೊಂಡು ಹೋದರೂ ಘಟಕದಲ್ಲಿ ಕೇಳುವವರಿಲ್ಲ.

ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಯೋ ಅಯಿಲ್ ಮತ್ತು ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಮಾರಾಟ ಮಾಡಬೇಕು. ಆದರೆ ಪ್ರತಿ ವರ್ಷ ಬೇಸಿಗೆಯಲ್ಲಿ ಘಟಕಕ್ಕೆ ಬೆಂಕಿ ತಗುಲುವ ಮೂಲಕ ಇರುವ ತ್ಯಾಜ್ಯ ವಸ್ತು ಸುಟ್ಟು ಭಸ್ಮವಾಗುತ್ತಿವೆ. ಇದರಿಂದ ಪುರಸಭೆಗೆ ಬರುವ ಲಾಭ ಇಲ್ಲದಂತಾಗಿದೆ. ತ್ಯಾಜ್ಯವನ್ನು ಪರಿವರ್ತನೆ ಮಾಡಿ ಲಾಭ ನಿರೀಕ್ಷೆ ಮಾಡಬೇಕು. ಆದರೆ ಅಂತಹ ಯಾವ ಕಾರ್ಯಗಳು ಇಲ್ಲಿ ಕಾಣುತ್ತಿಲ್ಲ.

ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿರುವ ಜಮೀನು ಸ್ವಚ್ಛ ಮಾಡಲು ಸೋಮವಾರ ಜಮೀನು ಮಾಲೀಕರು ಬೆಂಕಿ ಹಾಕಿದ್ದರು. ಅವರಿಗೆ ಬೆಂಕಿ ಬಾರದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಆದರೆ ಗಾಳಿಗೆ ಬೆಂಕಿ ಕಿಡಿ ಘಟಕಕ್ಕೆ ಬಂದು ಬಿದ್ದಿದೆ. ಘಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದ ಪ್ಲಾಸ್ಟಿಕ್ ಮತ್ತು ಪೇಪರ್​ಗೆ ಬೆಂಕಿ ಹೊತ್ತಿಕೊಂಡಿದೆ. ನಂದಿಸುವ ಪ್ರಯತ್ನ ನಡೆಯುತ್ತಿದೆ. | ಕೃಷ್ಣ ಡಿ. ಕಟ್ಟೆಮನಿ, ಮುಖ್ಯಾಧಿಕಾರಿ ಪುರಸಭೆ ಚನ್ನಗಿರಿ. ಘಟಕದ ಜವಾಬ್ಧಾರಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಬಂದ ಅನುದಾನವನ್ನು ಘಟಕದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಆದರೆ ಪದೇಪದೆ ಘಟಕಕ್ಕೆ ಬೆಂಕಿ ಬೀಳಲು ಏನು ಕಾರಣ ಎಂಬುದನ್ನು ಅಧಿಕಾರಿಗಳೇ ಉತ್ತರಿಸಬೇಕು. | ಲಕ್ಷ್ಮೀದೇವಮ್ಮ, ಪುರಸಭೆ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net