ಕೀರ್ತನೆ ವಿದ್ಯಾರ್ಥಿಗಳ ತಲುಪುವ ಮಾಧ್ಯಮ: ಶುಭಾ ಮರವಂತೆ

UDP-9-3-Sangeethotsava
Published on

ಉಡುಪಿ: ಸಂಗೀತ ಹಾಗೂ ಸಾಹಿತ್ಯದ ಎರಡೂ ಅಭಿರುಚಿ ಇದ್ದವರು ಸಹೃದಿಯಿಗಳಾಗಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಪುರಾಣ ಕಥೆಗಳೇ ಇರುತ್ತದೆ. ಆದರೆ, ಇಂದಿನ ಯುವ ಪೀಳಿಗೆಗೆ ಪುರಾಣ ಕಥೆಯೇ ಗೊತ್ತಿಲ್ಲ. ಹೀಗಾಗಿ ದಾಸ ಸಾಹಿತ್ಯದ ಮೂಲಕ ರಚಿಸಲ್ಪಟ್ಟ ಕೀರ್ತನೆಗಳು ವಿದ್ಯಾರ್ಥಿಗಳನ್ನು ತಲುಪುವ ಮಾಧ್ಯಮ ಆಗಬೇಕು ಎಂದು ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶುಭಾ ಮರವಂತೆ ಹೇಳಿದರು.

ಉಡುಪಿಯಲ್ಲಿ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ವಾದಿರಾಜ ಕನಕದಾಸ 45ನೆಯ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿ, 16ನೇ ಶತಮಾನ ದಾಸ ಸಾಹಿತ್ಯದ ಶತಮಾನ. ಆ ಕಾಲ ವಾದಿರಾಜರ ಹಾಗೂ ಕನಕದಾಸರ ಜೀವಿತಾವಧಿಯ ಸಮಯವಾಗಿತ್ತು ಎಂದರು.

  • ಭೂತಾರಾಧನೆಯ ತಾಣ ಹಾಗೂ ಜೈನ ಪರಂಪರೆ ಇರುವ ಪರಿಸರದಲ್ಲಿ ದಾಸ ಸಾಹಿತ್ಯವನ್ನು ಚಿಮ್ಮಿಸಿದವರು ವಾದಿರಾಜರು. ಉಡುಪಿಯನ್ನು ದಶಾವತಾರದ ಪರಂಪರೆಗೆ ಕೊಂಡೊಯ್ದ ಶ್ರೇಷ್ಠರು. ಅದೇ ರೀತಿಯಲ್ಲಿ ಅಸಮಾನತೆ ತಾಂಡವವಾಡುತ್ತಿದ್ದ ಆ ಕಾಲದಲ್ಲಿ 240 ರಾಗಗಳ ಛಾಯೆಗಳನ್ನೊಳಗೊಂಡ ಕೀರ್ತನೆ ರಚಿಸಿದವರು ಕನಕದಾಸರು. ಸಾಹಿತ್ಯ, ನೃತ್ಯ ಹಾಗೂ ಸಂಗೀತವೆಂಬ ಮೂರು ಪ್ರಕಾರ ಹೊಂದಿದ್ದ ದಾಸ ಸಾಹಿತ್ಯ ಅಂದಿನ ಪದ್ಧತಿಯಾಗಿತ್ತು. ಆದಿಕೇಶವನ ಅಂಕಿತದೊಂದಿಗೆ ಸಾವಿರಾರು ದಾಸ ಸಾಹಿತ್ಯ ರಚಿಸಿ, ಸಮಾನತೆ ಸಾರಿದ ಮಹಾನ್​ ಸಂತ ಕನಕದಾಸ 1547ರಲ್ಲಿ ಉಡುಪಿಗೆ ಬಂದಿದ್ದರು ಎಂದು ತಿಳಿಸಿದರು.

    ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎಸ್​. ಉಪಸ್ಥಿತರಿದ್ದರು. ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿ, ಪಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ತೀಕ್ಷಣ್​ ಶೆಟ್ಟಿ ಪ್ರಾರ್ಥಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಉಮಾ ಉದಯ ಶಂಕರ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net