ವಾದಿರಾಜರು ಯತಿಕುಲಕ್ಕೆ ಮುಕುಟಪ್ರಾಯ: ಪುತ್ತಿಗೆ ಶ್ರೀ

udp-21-puttige sri
Published on

ಉಡುಪಿ: ಪಾಂಡಿತ್ಯ, ಸಮಾಜಸುಧಾರಣೆ, ಸಿದ್ಧಿಸಾಧನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿಪೂರ್ಣತೆ ಸಾಧಿಸಿದ ವಾದಿರಾಜರು ಯತಿಕುಲಕ್ಕೆ ಮುಕುಟಪ್ರಾಯರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ರಾಜಾಂಗಣದಲ್ಲಿ ಪುತ್ತಿಗೆ ಮಠದ ಮೂಲಯತಿ ಉಪೇಂದ್ರ ತೀರ್ಥರ ಆರಾಧನೆ ಮತ್ತು ವಾದಿರಾಜ ತೀರ್ಥರ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಉಪೇಂದ್ರ ತೀರ್ಥರ ಆರಾಧನೆ ದಿನದಂದೇ ವಾದಿರಾಜರು ಅವತರಿಸಿದ್ದರಿಂದ ಅವರ ಸಾಹಸ ಸ್ವಭಾವದ ಉತ್ತರಾಧಿಕಾರಿ ಎಂಬುವುದು ನಮ್ಮ ಭಾವನೆ. ಅಷ್ಟಮಠಗಳ ಎಲ್ಲಾ ಯತಿಗಳನ್ನು ಒಗ್ಗೂಡಿಸಿ 2 ತಿಂಗಳ ಪರ್ಯಾಯವನ್ನು 2 ವರ್ಷಕ್ಕೆ ವಿಸ್ತರಿಸಿರುವುದು ಸಾಮಾನ್ಯ ಕೆಲಸವಲ್ಲ. ಅಸಾಧಾರಣ ಶಕ್ತಿ ಇದ್ದರೆ ಮಾತ್ರ ಇದು ಸಾಧ್ಯ ಎಂದು ಹೇಳಿದರು.

ಉಪೇಂದ್ರ ತೀರ್ಥರಿಂದ ಯತಿ ಧರ್ಮ ಪಾಲನೆ
ಆಚಾರ್ಯ ಮಧ್ವರ ಪ್ರಿಯ ಶಿಷ್ಯರಾಗಿದ್ದ ಉಪೇಂದ್ರ ತೀರ್ಥರು ಸಾಹಸಕ್ಕೆ ಹೆಸರುವಾಸಿಯಾಗಿದ್ದರು. ಡಕಾಯಿತರ ಕೈಯಿಂದಲೇ ಅವರ ಆಯುಧ ಕಸಿದುಕೊಂಡು ಅವರನ್ನು ಹೆದರಿಸಿ ಓಡಿಸುವ ಮೂಲಕ ಯಾವುದೇ ಹಿಂಸೆ ಮಾಡದೆ ಯತಿ ಧರ್ಮವನ್ನು ಪಾಲಿಸಿದ್ದಾರೆ. ಅವರ ಅನುಗ್ರಹ ನಮ್ಮ ಪರಂಪರೆಯ ಎಲ್ಲಾ ಯತಿಗಳಿಗೂ ಲಭ್ಯವಾಗಿದ್ದು, ಸಾಹಸ ಪ್ರವೃತ್ತಿ ಬೆಳೆಯಲು ಕಾರಣವಾಗಿದೆ ಎಂದರು.

ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮಹಿತೋಷ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಧ್ವಮಂಟಪದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಉದಯಾಸ್ತಮಾನ ಹಯವದನಾಂಕಿತ ಕೀರ್ತನೆಗಳ ಗಾಯನ ನಡೆಯಿತು. ರಥಬೀದಿಯಲ್ಲಿ ಶ್ರೀಮದುಪೆಂದ್ರತಿರ್ಥರ ಹಾಗೂ ಶ್ರೀ ವಾದಿರಾಜತೀರ್ಥರ ಭಾವಚಿತ್ರದ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net