ವಡ್ಡರ್ಸೆಯಲ್ಲಿ ಗೊರಿಲ್ಲಾ ಪ್ರತ್ಯಕ್ಷ, ಅರಣ್ಯಾಧಿಕಾರಿಗಳು ಬರುವಷ್ಟರಲ್ಲಿ ಮಂಗಮಾಯ

gorilla new
Published on

ಕೋಟ: ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಭಾರಿ ಗಾತ್ರದ ಗೊರಿಲ್ಲವೊಂದು ಕಾಣಿಸಿಕೊಂಡಿದೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿ ಸ್ಥಳೀಯರೊರ್ವರು ಬುಧವಾರ ಅರಣ್ಯ ಇಲಾಖೆ ಬ್ರಹ್ಮಾವರ ವ್ಯಾಪ್ತಿಯ ಅಧಿಕಾರಿಗಳ ಕಚೇರಿ ಕದ ತಟ್ಟಿದ್ದಾರೆ.

ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳೊಂದಿಗೆ ತೆರಳುವಷ್ಟರಲ್ಲಿ ಗೊರಿಲ್ಲ ಮಂಗಮಾಯವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ನೌಕರ ಅಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಎಂಟು ಎಕರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಗೊರಿಲ್ಲ ಪತ್ತೆಯಾಗಿಲ್ಲ.

ಪತ್ರಿಕಾ ವಿತರಕನ ಅಟ್ಟಾಡಿಸಿತು

ಬುಧವಾರ ಬೆಳಗ್ಗೆ ವಡ್ಡರ್ಸೆ ಭಾಗದ ಕೊತ್ತಾಡಿಯಲ್ಲಿ ವಿಜಯವಾಣಿ ಪತ್ರಿಕಾ ವಿತರಕ ಪ್ರಜ್ವಲ್ ಎಂಬುವರನ್ನು ಗೊರಿಲ್ಲ ಅಟ್ಟಿಸಿಕೊಂಡು ಬಂದಿದೆ ಎನ್ನಲಾಗಿದೆ. ಪ್ರಜ್ವಲ್ ಸೈಕಲ್‌ನಲ್ಲಿ ವೇಗವಾಗಿ ಹಿಂದಕ್ಕೆ ಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರಣ್ಯ ಪ್ರದೇಶ

ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಕಾಣಿಕೊಂಡ ಗೊರಿಲ್ಲ ಮೂರ‌್ನಾಲ್ಕು ದಿನಗಳಿಂದ ಅಲ್ಲೇ ತಿರುಗಾಡುತ್ತಿದೆ. ಈ ಅರಣ್ಯ ಪ್ರದೇಶ ಸನಿಹದಲ್ಲೇ ದಟ್ಟಾರಣ್ಯವಿದ್ದು, ಅಲ್ಲಿಂದ ಗೊರಿಲ್ಲ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಜಯಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net