1.50 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧ

vaddaramaadu
Published on

ಮಡಿಕೇರಿ:

ಕೆರೆಯ ನೀರು ಸೋರಿಕೆ ಆಗುತ್ತಿದ್ದು, ಕಟ್ಟೆ ಒಡೆಯುವ ಭೀತಿಯಲ್ಲಿದ್ದ ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ವಡ್ಡರಮಾಡು ಕೆರೆಗೆ ಕಾಯಕಲ್ಪ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಸುಮಾರು 75 ವರ್ಷದಷ್ಟು ಹಳೆಯ ಕೆರೆ ಗೇಟ್ ಬದಲಾಯಿಸಿ ಹೊಸಾ ಗೇಟ್ ಅಳವಡಿಸುವದು ಮತ್ತು ಕೆರೆಯಲ್ಲಿ ಸಂಗ್ರಹವಾದ ನೀರು ಸೋರಿ ಹೋಗದಿರಲು ನೂತನ ತಡೆಗೋಡೆ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು ಮಳೆಗಾಲ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ ಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿಯಲ್ಲಿ ಭಾನುವಾರ ಪ್ರಕಟವಾದ 'ವಡ್ಡರಮಾಡು ಕೆರೆ ಒಡೆಯುವ ಭೀತಿ' ವಿಶೇಷ ವರದಿಗೆ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖವಾಗಿದ್ದು, ಕಾರ್ಮಿಕರ ಮೂಲಕ ಕೆರೆ ಏರಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. ಗುರುವಾರ (ಜು.24) ಸಹಾಯಕ ಅಭಿಯಂತರ ಅರುಣ್ ಸ್ಥಳಕ್ಕೆ ಭೇಟಿ ನೀಡಲಿದ್ದು ವಡ್ಡರಮಾಡು ಕೆರೆ ಗೇಟನ್ನು ಸರಿ ಪಡಿಸಿ ಕೆರೆಯ ತುಂಬ ನೀರು ಸಂಗ್ರಹಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದ್ದಾರೆ.

ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸೂಚನೆ ಹಿನ್ನೆಲೆಯಲ್ಲಿ ವಡ್ಡರಮಾಡು ಕಟ್ಟೆಗೆ ನೂತನ ಗೇಟ್ ಅಳವಡಿಕೆ ಹಾಗೂ ತಡೆಗೋಡೆ ಅಭಿವೃದ್ಧಿಗೆ ರೂ.1.50 ಕೋಟಿಯ ಕ್ರಿಯಾ ಯೋಜನೆ ಸಲ್ಲಿಸಲಾಗುತ್ತಿದೆ. ವಡ್ಡರಮಾಡು ಕೆರೆ ಸಮೀಪದ, ತಳಭಾಗದ ನಿವಾಸಿಗಳಿಗೆ ಶಾಶ್ವತ ಪರಿಹಾರಕ್ಕಾಗಿ ಈ 1.50 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿರುವುದಾಗಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net