ವಡ್ಡರಮಾಡು ಕೆರೆ ಒಡೆಯುವ ಭೀತಿ

vaddaramaadu
Published on

ಮಡಿಕೇರಿ:

ಪೊನ್ನಂಪೇಟೆ ತಾಲೂಕು ವಡ್ಡರಮಾಡು ಕೆರೆಯ ಗೇಟ್ ಹಾಳಾಗಿ 3 ವರ್ಷವಾದರೂ ಇನ್ನೂ ದುರಸ್ತಿ ಆಗಿಲ್ಲ. ಈ ಬಗ್ಗೆ ಸಂಬAಧಿಸಿದ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿರುವ ಆರೋಪ ಕೇಳಿಬರುತ್ತಿದೆ. ಕೆರೆಯ ನೀರು ಸೋರಿಕೆ ಆಗುತ್ತಿದ್ದು, ಕಟ್ಟೆ ಒಡೆಯುವ ಭೀತಿಯಲ್ಲಿ ಅಚ್ಚುಕಟ್ಟು ಪ್ರದೇಶದ ನಿವಾಸಿಗಳು ಆತಂಕದಿAದಲೇ ದಿನದೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಕೊಡಗಿನಲ್ಲಿ ಮೇ ತಿಂಗಳಿನಿAದಲೇ ಸುರಿಯುತ್ತಿರುವ ಮಳೆಯಿಂದಾಗಿ ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ವಡ್ಡರಮಾಡು ಕೆರೆ ಕೂಡ ಭರ್ತಿ ಆಗುವುದರಲ್ಲಿತ್ತು. ಆದರೆ ಗೇಟ್‌ನಲ್ಲಿ ಸೋರುವಿಕೆ ಇರುವುದರಿಂದ ಸಾಮರ್ಥ್ಯದಷ್ಟು ನೀರು ಇಲ್ಲಿ ತುಂಬಿಲ್ಲ. ಎಲ್ಲವೂ ಸರಿ ಇದ್ದರೆ ಈ ಕೆರೆಯಲ್ಲಿ ಸುಮಾರು 25 ಅಡಿಗಳಷ್ಟು ನೀರು ಸಂಗ್ರಹ ಆಗುತ್ತದೆ. ಗೇಟ್‌ನಲ್ಲಿ ಸಮಸ್ಯೆ ಇರುವುದರಿಂದ 7 ಅಡಿಗೆ ಕುಸಿಯುವ ಸ್ಥಿತಿ ನಿರ್ಮಾಣ ಆಗಿದೆ. ಇದರ ಜತೆಗೆ ಗೇಟ್ ಸೋರುವಿಕೆಯಿಂದ ಕೆರೆಯ ಕಟ್ಟೆಗೂ ಹಾನಿ ಆಗುವ ಸಾಧ್ಯತೆ ಇದ್ದು, ಒಂದು ವೇಳೆ ಒಡೆದುಹೋದರೆ ಅಚ್ಚುಕಟ್ಟು ಪ್ರದೇಶದ ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆದುನಿಂತಿರುವ ಕೃಷಿ ಫಸಲು ನೀರು ಪಾಲಾಗುವ ಆತಂಕ ಎದುರಾಗಿದೆ.

ಈಗ ಪ್ರಮುಖವಾಗಿ ಸೋರುತ್ತಿರುವ ಗೇಟ್ ದುರಸ್ತಿ ಮಾಡಬೇಕಿದೆ. ಬೇಸಿಗೆ ಸಮಯದಲ್ಲಿ ಸಂಬAಧಿಸಿದ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಮಳೆ ಇರುವುದರಿಂದ ಶಾಶ್ವತ ಪರಿಹಾರ ಕಲ್ಪಿಸುವ ರೀತಿಯಲ್ಲಿ ಕಾಮಗಾರಿ ಅಸಾಧ್ಯ. ಹಾಗಾಗಿ ಮುಂಬರುವ ಭಾರಿ ಮಳೆ ಸಂದರ್ಭ ಸಂಭಾವ್ಯ ಕೆರೆ ಏರಿ ಕುಸಿತವನ್ನು ತಡೆದು ಅಚ್ಚುಕಟ್ಟು ಪ್ರದೇಶದ ಬೆಳೆಗಾರರ ಹಿತ ಕಾಪಾಡಬೇಕಿದೆ ಎನ್ನುವ ಆಗ್ರಹ ಸ್ಥಳೀಯರಿಂದ ಕೇಳಿಬರುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿ ಇರುವುದಾಗಿಯೂ ಹೇಳುತ್ತಿದ್ದಾರೆ.

ಕಳೆದ 3 ವರ್ಷಗಳಿಂದಲೂ ಮಳೆಗಾಲದಲ್ಲಿ ನೀರು ಸೋರಿಕೆ ಆಗಿ ಹೋಗುತ್ತಿರುವುದರಿಂದ ಬೇಸಿಗೆಯಲ್ಲಿ ಈ ವ್ಯಾಪ್ತಿಯಲ್ಲಿ ಸಮಸ್ಯೆ ಆಗುತ್ತಿದೆ. ಕಳೆದ ಬೇಸಿಗೆಯಲ್ಲಿ ಇದರ ಅನುಭವ ದೊಡ್ಡ ಪ್ರಮಾಣದಲ್ಲಿಯೇ ಆಗಿತ್ತು. ಜಾನುವಾರುಗಳಿಗೆ ಕುಡಿಯುವ ನೀರು ಇರಲಿಲ್ಲ. ವನ್ಯಪ್ರಾಣಿಗಳು ಕೂಡ ಜೀವ ಜಲ ಹುಡುಕುತ್ತಾ ಜನವಸತಿ ಪ್ರದೇಶಗಳ ಕಡೆಗೆ ಬಂದಿದ್ದವು. ಹಾಗಾಗಿ ಈಗ ಸೋರಿಕೆಗೆ ಕಡಿವಾಣ ಹಾಕಿದರೆ ಮುಂದಿನ ಬೇಸಿಗೆಗೆ ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚು ಕಾಣಬಹುದು ಎನ್ನುತ್ತಾರೆ ಸ್ಥಳೀಯರು. ಕಳೆದ 15 ವರ್ಷಗಳಿಂದ ಕೆರೆಯ ಹೂಳು ತೆಗೆದಿಲ್ಲ. ಈ ಬಗ್ಗೆಯೂ ಈಗಲೇ ಯೋಜನೆ ರೂಪಿಸಬೇಕಿದೆ ಎನ್ನುವ ಬೇಡಿಕೆಯೂ ಇದೆ.

1950ರ ಸುಮಾರಿಗೆ ವಡ್ಡರಮಾಡು ಕೆರೆ ನಿರ್ಮಾಣ ಆಗಿದೆ ಎನ್ನುವುದು ಸ್ಥಳೀಯರ ಮಾಹಿತಿ. 15 ಎಕರೆ ವಿಸ್ತೀರ್ಣದ ಈ ಕೆರೆ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಸರಹದ್ದಿನಲ್ಲಿಯೇ ಇದೆ. ಕಳೆದ 75 ವರ್ಷಗಳಿಂದ ಈ ಕೆರೆ ಈ ವ್ಯಾಪ್ತಿಯ ಜನ, ಜಾನುವಾರು, ಕಾಡು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರುಣಿಸಿ ದಾಹ ತಣಿಸುತ್ತಾ ಬಂದಿದೆ. ನಿಟ್ಟೂರು ವ್ಯಾಪ್ತಿಯ ಸುಮಾರು 200 ಎಕರೆ ಪ್ರದೇಶದ ಭೂಮಿಗೂ ವಡ್ಡರಮಾಡು ಕೆರೆ ಬೇಸಿಗೆಯಲ್ಲಿ ನೀರಿನ ಆಸರೆಯಾಗಿದೆ. ಕೆರೆಯಲ್ಲಿ ಹುಟ್ಟಿಕೊಳ್ಳುವ ನೀರಿನ ಝರಿ ಬಾಳೆಲೆ ಸಮೀಪ ಲಕ್ಷ್ಮಣ ತೀರ್ಥ ನದಿ ಸೇರುತ್ತದೆ.

ವಡ್ಡರಮಾಡು ಕೆರೆಯಿಂದ ಈ ಭಾಗದಲ್ಲಿ ಸಾಕಷ್ಟು ಪ್ರಯೋಜನ ಆಗುತ್ತದೆ. ಕೆರೆಯಲ್ಲಿ ಉತ್ತಮ ನೀರಿದ್ದರೆ ಅಂತರ್ಜಲ ವೃದ್ಧಿಯಾಗಿ ಸುತ್ತಮುತ್ತಲಿನ ಕೊಳವೆ ಬಾವಿ, ತೆರೆದ ಬಾವಿ, ಚಿಕ್ಕ ಪುಟ್ಟ ಕೊಳಗಳಲ್ಲಿ ಯಥೇಚ್ಛ ನೀರು ಸಂಗ್ರಹ ಆಗಿರುವುದು ಕಂಡು ಬರುತ್ತದೆ. ಬೇಸಿಗೆಯಲ್ಲಿ ಈ ವ್ಯಾಪ್ತಿಯ ಬೆಳೆಗಾರರಿಗೆ ಕಾಫಿ, ಕಾಳುಮೆಣಸು, ಅಡಿಕೆ ಕೃಷಿ ಮಾಡಲು ಸಾಕಷ್ಟು ಅನುಕೂಲ ಒದಗಿಸುತ್ತದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನ ಬದಿಯಲ್ಲಿಯೇ ಈ ಕೆರೆ ಇರುವದರಿಂದ ವನ್ಯ ಪ್ರಾಣಿಗಳಿಗೂ ಬೇಸಿಗೆಯಲ್ಲಿ ದಾಹ ಇಂಗಿಸಲು ಸಹಕರಿಸುತ್ತದೆ. ಹಲವು ಬಗೆಯ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುತ್ತಾ ಬಂದಿದೆ.

ನಾಗರಹೊಳೆ ಕಟ್ಟೆಹಾಡಿಯಲ್ಲಿ ವಾಸ ಮಾಡುವವರು ನಿಟ್ಟೂರು, ಬಾಳೆಲೆೆ ಹಾಗೂ ಶಾಲಾ-ಕಾಲೇಜಿಗೆ ತೆರಳಲು ವಡ್ಡರಮಾಡು ಕೆರೆ ಏರಿಯ ಕಾಲುದಾರಿಯನ್ನು ಬಳಸುತ್ತಿದ್ದರು. ಆದರೆ ನಿರ್ವಹಣೆ ಇಲ್ಲದೆ ಈಗ ಅಲ್ಲಿ ಕುರುಚಲು ಕಾಡು ಬೆಳೆದಿದೆ. ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಎಂ.ಆರ್. ಸೀತಾರಾಮ್ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ಸಂದರ್ಭ ಕೆರೆ ಪಕ್ಕದಲ್ಲಿ ರಸ್ತೆ ನಿರ್ಮಿಸಲು ಸಹಕರಿಸಿದರಿಂದ ಬದಲಿ ಮಾರ್ಗವಾಗಿ ಸರಾಗವಾಗಿ ತಿರುಗಾಡಲು ಆಗುತ್ತಿದೆ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಈ ಕೆರೆ ಸ್ಥಳೀಯರಿಗೆ ಸಾಕಷ್ಟು ಪ್ರಯೋಜನಕಾರಿ ಆಗಿತ್ತು. ಸುಮಾರು 35 ಮೋಟಾರು ಇಟ್ಟು ಕಾಫಿ ತೋಟಗಳಿಗೆ ನೀರು ಹಾಯಿಸಲಾಗುತ್ತಿತ್ತು. ನಂತರ ಅದು ಅರಣ್ಯ ಇಲಾಖೆ ನಿರ್ವಹಣೆಗೆ ಹೋಯಿತು. 2018ರ ಪ್ರಾಕೃತಿಕ ವಿಕೋಪ ಸಂದರ್ಭ ಕೆರೆಯ ಏರಿ ಕುಸಿತವಾಯಿತು. ಈ ಸಂದರ್ಭ ಅಚ್ಚುಕಟ್ಟು ಪ್ರದೇಶದವರಿಗೆ ಸಾಕಷ್ಟು ಹಾನಿ ಆಗಿತ್ತು. ನಂತರ ಸಣ್ಣ ನೀರಾವರಿ ಇಲಾಖೆಯವರು ಇಲ್ಲಿ ಕಡೆಗೋಡೆ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಕಳೆದ 3 ವರ್ಷಗಳಿಂದ ಗೇಟ್ ಸೋರುತ್ತಿದೆ. ಇದರಿಂದ ಕಟ್ಟೆ ಒಡೆದು ಹೋಗಬಹುದು. ನಮಗೆ ಇಲ್ಲಿರಲು ಭಯ ಆಗುತ್ತಿದೆ. ಸರಿ ಮಾಡಿಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ತೀತೀರ ಚೋಂದಮ್ಮ ಜಯ, ವಡ್ಡರಮಾಡು ಗ್ರಾಮ

ವಡ್ಡರಮಾಡು ಕೆರೆ ಗೇಟ್ ಹಾಳಾಗಿರುವುದು ಏಪ್ರಿಲ್-ಮೇನಲ್ಲಿ ನಮ್ಮ ಗಮನಕ್ಕೆ ಬಂತು. ಈಗ ಗೇಟ್ ದುರಸ್ತಿ ಆಗಿದೆ. ಮಳೆ ಮುಗಿಯುತ್ತಿದ್ದಂತೆ ಗೇಟ್ ಅಳವಡಿಕೆ ಮಾಡಿಕೊಡಲಾಗುವುದು. ಈಗ ನೀರು ಶೇಖರಣೆ ಮಾಡಲು ಚೀಲ ಹಾಕಲಾಗುತ್ತಿದೆ. ಚೀಲ ಹಾಕಿ ಲೀಕೇಜ್ ಬಂದ್ ಮಾಡಲಾಗುತ್ತಿದೆ. ಸ್ಥಳ ಪರಿಶೀಲನೆ ಮಾಡಲಾಗಿದೆ. ಕೆರೆಗೆ ಏನೂ ಸಮಸ್ಯೆ ಇಲ್ಲ. ಏರಿಯ ಕುರುಚಲು ಕಾಡು ತೆರವಿಗೆ ಅರಣ್ಯ ಇಲಾಖೆ ಜತೆ ಮಾತನಾಡಿದ್ದೇವೆ.

ಕುಮಾರಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net