ಬೈಕ್ ಸವಾರ ಸಾವು ಖಂಡಿಸಿ ಪ್ರತಿಭಟನೆ

BENKI
ಗಂಗಾವತಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಗ್ರಾಮದ ಮುಖಂಡರು ಪ್ರತಿಭಟನೆ ನಡೆಸಿದರು.
Published on

ಗಂಗಾವತಿ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ವಡ್ಡರಹಟ್ಟಿಯಲ್ಲಿ ಮಂಗಳವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ ಸ್ಥಳೀಯರು ರಾಜ್ಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಡ್ಡರಹಟ್ಟಿಯ ಮುರ್ತುಜಾಸಾಬ್ (42) ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಪರಾರಿಯಾಗಿದ್ದಾನೆ. ಅಪಘಾತಕ್ಕೆ ರಸ್ತೆಯಲ್ಲಿ ರೋಡ್ ಬ್ರೇಕರ್‌ಗಳು ಇಲ್ಲದಿರುವುದೇ ಕಾರಣ ಎಂದು ಆರೋಪಿಸಿದ ಸ್ಥಳೀಯರು ಟೈರ್‌ಗಳಿಗೆ ಬೆಂಕಿ ಹಂಚಿ ಪೊಲೀಸರ ವಿರುದ್ಧ ೋಷಣೆ ಕೂಗಿದರು. ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ವಾಹನಗಳ ತಡೆದು ಗದ್ದಲ ನಡೆಸಿದರು. ಘಟನೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.

ರೋಡ್ ಬ್ರೇಕರ್ ಹಾಕಲು ಆಗ್ರಹ: ರೋಡ್ ಬ್ರೇಕರ್ ಹಾಕಿ ಇಲ್ಲವೇ ರಸ್ತೆ ಅಗೆಯಲು ಅವಕಾಶ ಕೊಡಿ ಎಂದು ಯುವಕರು ಪೊಲೀಸರನ್ನು ಒತ್ತಾಯಿಸಿದ್ದರಿಂದ ಕೆಲಕಾಲ ಗಲಾಟೆ ನಡೆಯಿತು. ಸ್ಥಳಕ್ಕೆ ಪ್ರಕಾಶ ಮಾಳೆ ನೇತೃತ್ವದ ಪೊಲೀಸರು ಆಗಮಿಸಿ, ಎರಡು ದಿನ ಗಡವು ನೀಡಿ ಎಂದರೂ ಕೆಲವರು ಒಪ್ಪಲಿಲ್ಲ. ರೋಡ್ ಬ್ರೇಕರ್ ಹಾಕಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಪೊಲೀಸರು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಇತ್ತೀಚಿನ ದಿನಗಳಲ್ಲಿ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದ್ದು, ವಾರದಲ್ಲಿ ಎರಡು ಅಪಘಾತ ಸಂಭವಿಸಿದ್ದು, ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ. ಇದೇ ರಸ್ತೆಗೆ ಹೊಂದಿಕೊಂಡು 5ಕ್ಕೂ ಹೆಚ್ಚು ಶಾಲೆಗಳಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲಿ ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರೋಡ್ ಬ್ರೇಕರ್ ಹಾಕದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ ನಾವೇ ರಸ್ತೆ ಅಗೆದು ತಾತ್ಕಾಲಿಕ ಹಂಪ್ಸ್ ನಿರ್ಮಿಸುತ್ತೇವೆಂದು ಗ್ರಾಮಸ್ಥರು ಎಚ್ಚರಿಸಿದರು. ಗ್ರಾಮೀಣ ಪಿಐ ಸೋಮಶೇಖರ್ ಜುತ್ತಲ್, ಸಂಚಾರ ಠಾಣೆ ಪಿಎಸ್‌ಐ ಎಸ್.ಜಿ.ದೊಡ್ಡಾಣಿ ನೇತೃತ್ವದ ಪೊಲೀಸರು ಆಗಮಿಸಿ, ರಸ್ತೆ ಮಧ್ಯೆ ಟೈರ್‌ಗಳಿಗೆ ಹಚ್ಚಿದ್ದ ಬೆಂಕಿ ನಂದಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಆಂಧ್ರ ಮೂಲದ ಲಾರಿ ಡಿಕ್ಕಿ

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಅಂಬಾಭವಾನಿ ದೇವಾಲಯದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ವಡ್ಡರಹಟ್ಟಿ ಸಂಗಮೇಶ್ವರ ಕ್ಯಾಂಪ್‌ನ ಮುರ್ತುಜಾಸಾಬ್ (42) ಮೃತ. ಬೈಕ್‌ನಲ್ಲಿ ಮನೆಯತ್ತ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಆಂಧ್ರ ಮೂಲದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net