ಕಲ್ಲುಗಳಿಗೆ ಆಕೃತಿ ನೀಡುತ್ತಿದ್ದ ಊರೇ ವಡ್ಡರಹಳ್ಳಿ

19kkr3 (10-25 vaddarahalli view
Published on

ಕಿಕ್ಕೇರಿ: ಪಾಳೇಗಾರರ ಕಾಲದಲ್ಲಿ ಇಲ್ಲಿನ ಮಣ್ಣಿನ ಮಡಕೆ, ಕುಡಿಕೆ, ಹೆಂಚು ಹಾಗೂ ಕಲಾಕಾರರು ಆಕೃತಿಗಳನ್ನು ಕಲ್ಲಿನಲ್ಲಿ ಸೃಷ್ಟಿಸುತ್ತಿದ್ದ ವಡ್ಡರ ಕುಟುಂಬದಿಂದ ಗ್ರಾಮಕ್ಕೆ ವಡ್ಡರಹಳ್ಳಿ ಹೆಸರು ಬಂದಿದೆ.

ಕಿಕ್ಕೇರಿ ಹೋಬಳಿಯ ಉತ್ತರಕ್ಕೆ 3 ಕಿ.ಮೀ. ಅಂತರದಲ್ಲಿ ಗ್ರಾಮವಿದ್ದು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮ ದೇಗುಲಗಳ ಬೀಡಾಗಿದ್ದು ಧಾರ್ಮಿಕ ನೆಲೆಗಟ್ಟಿನಲ್ಲಿರುವಂತಿದೆ. ಹಿಂದೆ ಕಲ್ಲನ್ನು ಕತ್ತರಿಸುವ, ಮನೆಗಳಿಗೆ ಅಚ್ಚುಕಟ್ಟಿನ ಕಲ್ಲು, ದೇಗುಲ ನಿರ್ಮಾಣಕ್ಕೆ ಬಂಡೆ ಕತ್ತರಿಸಿ ಆಕೃತಿಗೆ ತಕ್ಕಂತೆ ಕಲ್ಲನ್ನು ನಿರ್ಮಿಸಿಕೊಡುತ್ತಿದ್ದ ಕುಶಲಕರ್ಮಿಗಳು ಗ್ರಾಮದಲ್ಲಿದ್ದರು. ಈ ಕುಟುಂಬಗಳಿಗೆ ವಡ್ಡರು ಎಂದೂ ಕರೆಯಲಾಗುತ್ತಿತ್ತು. ಇವರು ಸಣ್ಣದಾಗಿ ಗುಡಿಯಂಥ ಜೋಪಡಿ ನಿರ್ಮಿಸಿಕೊಂಡಿದ್ದ ಕಾರಣ ಗ್ರಾಮಕ್ಕೆ ವಡ್ಡರಗುಡಿ ಎಂದು ಹೆಸರು ಬಂದಿದೆ ಎನ್ನುತ್ತಾರೆ ಹಿರಿಯರು.

ಕಾಲಕ್ರಮೇಣ ಗ್ರಾಮ ಕಾಲಕ್ಕೆ ತಕ್ಕಂತೆ ವಡ್ಡರಹಳ್ಳಿ ಎಂದು ಹೆಸರು ಬದಲಾವಣೆಯಾಗಿದೆ. ಗ್ರಾಮವನ್ನು ಹೇಮಾವತಿ ನಾಲೆ ಸುತ್ತುವರಿದಿದ್ದು ಒಂದು ರೀತಿ ದ್ವೀಪದಂತೆ ಗ್ರಾಮವಾಗಿದೆ. ಆದರೆ ರೈತರಿಗೆ ಅನುಕೂಲವಾಗುವಂತೆ ನಾಲೆಯಲ್ಲಿ ನೀರು ಹರಿಯದಿರುವ ಕೊರಗು ಇಲ್ಲಿನ ರೈತರಿಗಿದೆ.

ಗ್ರಾಮಕ್ಕೆ ಪೂರ್ವ, ಪಶ್ಚಿಮ, ಉತ್ತರದಿಂದ ಪ್ರವೇಶಿಸಲು ದಾರಿಗಳಿವೆ. ಪೂರ್ವ ದಿಕ್ಕಿನಲ್ಲಿ ಪ್ರವೇಶ ಮಾಡುವಾಗ ತಂಗಾಳಿ ನೀಡುವ ಅಶ್ವತ್ಥವೃಕ್ಷ ಸ್ವಾಗತಿಸುವಂತಿದೆ. ಜತೆಗೆ ಶ್ರೀ ಶನೈಶ್ಚರಸ್ವಾಮಿ ದೇಗುಲ, ತುಸು ದೂರದಲ್ಲಿ ಆಂಜನೇಯ ದೇಗುಲ ಇದೆ. ರೈತಾಪಿ ಕುಟುಂಬಗಳು ನೆಲೆಸಿರುವ ಗ್ರಾಮದಲ್ಲಿ ಸಾಮರಸ್ಯ, ಒಗ್ಗಟ್ಟಿನ ಬಲವಿದೆ. ಸಾವಿರ ಜನಸಂಖ್ಯೆ ಇದೆ. 200 ಮನೆಗಳಿವೆ. ಪಟೇಲಗಾರಿಕೆ ಗ್ರಾಮದಲ್ಲಿದ್ದು ನ್ಯಾಯ ತೀರ್ಮಾನಕ್ಕೆ ಸಿದ್ಧಹಸ್ತರಂತಿದ್ದರು. ಒಕ್ಕಲಿಗ, ಹಳ್ಳಿಕಾರ, ಹಾಲುಮತಸ್ಥ, ವೈಷ್ಣವ, ವಿಶ್ವಕರ್ಮ ಸೇರಿದಂತೆ ಹಲವು ಸಮುದಾಯ ಬದುಕು ಕಟ್ಟಿಕೊಂಡಿವೆ. ಗ್ರಾಮದಲ್ಲಿ ಹೇಮಾವತಿ ನಾಲೆ ಹಾಗೂ ಕೆರೆ ಇದ್ದು ಹಚ್ಚಹಸಿರಾಗಿಸಿದೆ. ಕೃಷಿ, ಹೈನುಗಾರಿಕೆ ಪ್ರಧಾನವಾಗಿದೆ. ಕಬ್ಬು, ತೆಂಗು, ಅಡಕೆ, ಭತ್ತ ಕೃಷಿ ಬೆಳೆಯಾಗಿದೆ. ಸಾಕ್ಷರಸ್ಥರು ಗ್ರಾಮದಲ್ಲಿ ನೆಲೆಸಿದ್ದಾರೆ.

ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ಗ್ರಾಮ ಸೇರಿದ್ದು, ಹಾಲಿನ ಡೇರಿ, ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಕಿಕ್ಕೇರಿ ಶ್ರವಣಬೆಳಗೊಳ ಮಾರ್ಗದಲ್ಲಿ ಗ್ರಾಮಕ್ಕೆ ತೆರಳಲು ವಡ್ಡರಹಳ್ಳಿ ಕ್ರಾಸ್‌ನಲ್ಲಿ ಬಸ್‌ನಲ್ಲಿ ಇಳಿದು ಸುಮಾರು ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕಿದೆ. ಕೆ.ಆರ್. ಪೇಟೆ, ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಮಾರ್ಗವಾಗಿ ಬರಲು ಬಸವನಹಳ್ಳಿ ಕೂಡಿನಿಂದ 1ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಬಹುದಾಗಿದೆ.

ಹಿಂದೆ ಪಾಳೇಗಾರರ ಕಾಲದಲ್ಲಿ ಗ್ರಾಮಕ್ಕೆ ಪ್ಲೇಗ್ ಮಹಾಮಾರಿ ಕಾಯಿಲೆ ಒಕ್ಕರಿಸಿಕೊಂಡಿತ್ತು. ಪರಿಣಾಮ ಇಡೀ ಊರಿಗೇ ಊರೇ ಖಾಲಿ ಮಾಡಿ ಗ್ರಾಮಸ್ಥರು ಗ್ರಾಮದ ಪಶ್ಚಿಮ ಭಾಗಕ್ಕೆ ತೆರಳಿದರು. ಬಿಳಗಯ್ಯನ ಪಾಳು ಎನ್ನುವ ಬೀಳು ಭೂಮಿಯಲ್ಲಿ ಗುಡಿಸಲು ನಿರ್ಮಿಸಿಕೊಂಡರು. ಈ ಸ್ಥಳದಲ್ಲಿ ಬೃಹತ್ ಹುಣಸೇಮರ, ದೊಡ್ಡದಾದ 4 ಕಲ್ಲುಗಳು ಇದ್ದವು. ಈ ಕಲ್ಲುಗಳು ಗ್ರಾಮಸ್ಥರು, ಜಾನುವಾರುಗಳಿಗೆ ರಕ್ಷಕರಂತಿದ್ದವು. ಕಾಲಕ್ರಮೇಣ ಗ್ರಾಮ ಇಲ್ಲಿಂದ ಬೆಳೆಯುತ್ತ ಮೂಲ ಗ್ರಾಮದವರಿಗೆ ಮನೆಗಳು ನಿರ್ಮಾಣವಾದವು.

ಗ್ರಾಮರಕ್ಷಕಿಯಾಗಿ ಊರ ಹೊರವಲಯದಲ್ಲಿ ದ್ಯಾವಮ್ಮ ದೇಗುಲವಿದೆ. ತುಸು ದೂರದಲ್ಲಿ ರೈತರ ಬದುಕಿಗೆ ಆಸರೆಯಾಗಿ ದ್ಯಾವಮ್ಮನ ಕೆರೆ ಇದೆ. ಹಿಂದೆ ಕೇವಲ ಮಳೆಗೆ ಕೆರೆ ತುಂಬಿ ಹರಿಯುತ್ತಿತ್ತು. ಒತ್ತುವರಿ ಕಾಟದಿಂದ ನೀರಿನ ಸೆಲೆಯ ಜಾಡು ಮುಚ್ಚಿದೆ. ಹೇಮಾವತಿ ನಾಲೆಯಿಂದ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಕೆರೆಯ ಮಧ್ಯೆ ಹಿಂದೆ ದ್ಯಾವಮ್ಮನ ಪುಟ್ಟ ಗುಡಿ ಇತ್ತು. ಕಾಲಕ್ರಮೇಣ ಇದು ಮುಚ್ಚು ಹೋಗಿದೆ. ಇಲ್ಲಿದ್ದ ಸುಂದರ ರಥ ಕೂಡ ಕೆರೆಯಲ್ಲಿ ಮುಳುಗಡೆಯಾಗಿದೆ ಎನ್ನುತ್ತಾರೆ ಹಿರಿಯರು.

ದ್ಯಾವಮ್ಮ ದೇವಿ ಹಬ್ಬ ಗ್ರಾಮದ ಹಿರಿಯರು ಒಂದೆಡೆ ಸೇರಿ ಚರ್ಚಿಸಿ ಕೆರೆಯ ಮೇಲ್ಭಾಗದ ದಂಡೆಯಲ್ಲಿ ದ್ಯಾವಮ್ಮ ದೇವಿ ದೇಗುಲ ನಿರ್ಮಿಸಿದ್ದಾರೆ. ಕಾರ್ತಿಕ ಮುಗಿದು ಷಷ್ಠಿ ಕಾಲದಲ್ಲಿ ದೇವಿಯನ್ನು ಹಬ್ಬ ಆಚರಣೆಗಾಗಿ ಪ್ರಾರ್ಥಿಸಲಾಗುತ್ತದೆ. ಸಿಡಿರಾಯನ ಸಿಡಿ ಬಂಡಿ ಹಬ್ಬ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿತ್ತು. ದೂರದಲ್ಲಿನ ಐಕನಹಳ್ಳಿ ಗ್ರಾಮದವರು ಸಿಡಿಕಲ್ಲನ್ನು ತೆಗೆದುಕೊಂಡ ಹೋದ ಪರಿಣಾಮ ಹಬ್ಬ ಸ್ಥಗಿತವಾಯಿತು. ಗ್ರಾಮದ ಕೆರೆಯ ತಟದಲ್ಲಿ ನೆಲೆಸಿದ್ದ ಹಚ್ಚಗನ್ಯೆ, ದೇವಗನ್ಯೆ ದೇವರು ಗ್ರಾಮದಿಂದ ಅದೃಶ್ಯವಾದರು. ಐಕನಹಳ್ಳಿ ಗ್ರಾಮದಲ್ಲಿ ನೆಲೆಸಿದರು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ರಂಗದ ಹಬ್ಬ ವಿಶೇಷ ಗ್ರಾಮದಲ್ಲಿ ನಡೆಯುವ ತಿಂಗಳುಗಟ್ಟಲೆಯ ರಂಗದ ಹಬ್ಬ ವಿಶೇಷವಾಗಿದೆ. ಶಿವರಾತ್ರಿ ಕಳೆದು ಯುಗಾದಿ ಆರಂಭದ ಮುನ್ನ ರಂಗದಹಬ್ಬ ನಡೆಯಲಿದೆ. ಹಬ್ಬಕ್ಕೂ ಮುನ್ನ ರಂಗಸ್ಥಳದ ಕಲ್ಲಿಗೆ ತಳಿರು ತೋರಣ, ಬಾಳೆದಿಂಡು ಕಟ್ಟಲಾಗುತ್ತದೆ. ಮಾಂಸ, ಮದ್ಯ ನಿಷೇಧಿತ ಇರಲಿದೆ. ಪ್ರತಿದಿನ ರಾತ್ರಿ ಯುವಕರು, ಮಕ್ಕಳಿಗೆ ರಂಗಕುಣಿತದ ತಾಲೀಮನ್ನು ಹಿರಿಯರು ಕಲಿಸಿಕೊಡುತ್ತಾರೆ. ಅಂತಿಮವಾಗಿ ರಂಗದಹಬ್ಬ ಆರಂಭವಾಗಿ ಆಂಜನೇಯ ದೇವರಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ. ದೇವರ ಮೆರವಣಿಗೆಯೊಂದಿಗೆ ಹುಲಿವೇಷ, ರಂಗಕುಣಿತ ಇಡೀ ರಾತ್ರಿ ನಡೆಯಲಿದೆ. ಇಡೀ ಊರು ವಿದ್ಯುತ್‌ದೀಪಗಳಿಂದ ಅಲಂಕೃತವಾಗಿ ಬಂದ ನೆಂಟರಿಷ್ಟರಿಗೆ ಭೋಜನಾತಿಥ್ಯ ನೀಡಲಾಗುತ್ತದೆ. ವಡ್ಡರಹಳ್ಳಿ ದ್ವೀಪ ಗ್ರಾಮದಂತಿದೆ. ಅದರೆ ವಾಹನ ಸೌಲಭ್ಯವಿಲ್ಲದೆ ಕೊಂಪೆಯಂತಿದೆ. ಮಡಕೆ, ಕುಡಿಕೆ, ಹೆಂಚು ನಿರ್ಮಾಣಕ್ಕೆ ಹೆಸರುವಾಸಿಯಾಗಿತ್ತು ಎನ್ನುವುದು ಹೆಮ್ಮೆ. ಹೇಮಾವತಿ ನಾಲೆಯಲ್ಲಿ ನೀರು ಹರಿದರೆ ಮಾತ್ರ ರೈತರ ಬದುಕು ಸಾಗಲಿದೆ. ಗ್ರಾಮದಲ್ಲಿ ಶಾಸನಗಳಿದ್ದವು. ಹಿಂದೆಯೇ ಹಾಳಾಗಿರುವುದು ಬೇಸರ ಸಂಗತಿ. ರವಿ ಮಾಜಿ ಉಪಾಧ್ಯಕ್ಷ, ತಾಪಂ ವಡ್ಡರಹಳ್ಳಿ ಗ್ರಾಮದಲ್ಲಿ ದ್ಯಾವಮ್ಮ ದೇವಿ ಸತ್ಯ ನುಡಿಸುವ ದೇವಿಯಾಗಿದ್ದಾಳೆ. ಗ್ರಾಮವನ್ನು ಒಂದೆಡೆ ರಕ್ಷಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮವನ್ನು ಆಂಜನೇಯ ದೇವರು ಕಾಯುತ್ತಿದ್ದಾನೆ. ರಂಗದ ಹಬ್ಬ ಜಾನಪದ ಕಲೆ ಉಳಿವಿಗೆ ಸಾಕ್ಷಿಯಾಗಿದೆ. ರಮೇಶ ಮಾಜಿ ಸದಸ್ಯ, ಗ್ರಾಪಂ ಹಿಂದೆ ಪ್ಲೇಗ್ ರೋಗ ಬಂದು ಇಡೀ ಊರೇ ಖಾಲಿಯಾಗಿತ್ತು. ಬಿಳಿಗಯ್ಯನ ಪಾಳಿಗೆ ಗ್ರಾಮಸ್ಥರು ಗುಳೆ ಹೋಗಿ ನೆಲೆಸಿದ್ದರು. ಇಲ್ಲಿದ್ದ ಹುಣಸೇಮರ ಆಶ್ರಯ ತಾಣವಾದರೆ, ಇಲ್ಲಿನ 4 ಕಲ್ಲು ನಮ್ಮ ಹಿರಿಯರನ್ನು ಶತ್ರು, ಪೀಡೆಗಳಿಂದ ರಕ್ಷಿಸುತ್ತಿತ್ತು ಎನ್ನುವುದುಂಟು. ಗ್ರಾಮ ಕೊಂಪೆಯಾದರೂ ಭಕ್ತಿ, ಸಾಮರಸ್ಯ, ಒಗ್ಗಟ್ಟಿನ ತಾಣವಾಗಿದೆ. ಅಯ್ಯಂಗಾರಣ್ಣನ ಚಿಕ್ಕೇಗೌಡ ಹಿರಿಯ ನಾಗರಿಕ ಗ್ರಾಮದಲ್ಲಿರುವ ದ್ಯಾವಮ್ಮನ ಕೆರೆ ಗ್ರಾಮ ಸುಭಿಕ್ಷತೆಗೆ ಸಾಕ್ಷಿಯಾಗಿದೆ. ಹಿಂದೆ ವಡ್ಡರು ಗ್ರಾಮದಲ್ಲಿ ನೆಲೆಸಿ ತಮ್ಮ ವೃತ್ತಿ ಬದುಕಿನಿಂದ ಹೆಸರುವಾಸಿಯಾಗಿದ್ದರು. ವಡ್ಡರಗುಡಿಯಾಗಿಸಿದ್ದ ಇವರ ಹೆಸರಿನಲ್ಲಿ ಊರಿತ್ತು. ಗ್ರಾಮದ ಹದವಾದ ಕೆಂಪುಮಿಶ್ರಿತ ಮಣ್ಣು ಹೆಂಚು, ಮಡಕೆ ದೀರ್ಘಕಾಲ ಬಾಳ್ವಿಕೆಗೆ ಸಾಕ್ಷಿಯಾಗಿತ್ತು. ಅಂಥ ಮಣ್ಣಿನ ಗುಣ ನಮ್ಮೂರಿಗೆ ಇರುವುದು ಶೋಭೆಯಾಗಿದೆ. ವೆಂಕಟಮ್ಮ ವೃದ್ಧೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net