

ಮುಂಡರಗಿ: ಬಸವಾದಿ ಶರಣರು ಸೀ-ಪುರುಷರಿಗೆ ಸಮಾನತೆ ನೀಡಿದರು. ಶರಣರ ವಚನಗಳು ಸಾರ್ವಕಾಲಿಕವಾಗಿದ್ದು ಎಲ್ಲರೂ ಅವುಗಳನ್ನು ಅಧ್ಯಯನ ಮಾಡುವುದರ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಕಸಾಪ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೀಣಾ ಪಾಟೀಲ ಹೇಳಿದರು.
ಪಟ್ಟಣದ ಅಂಬಾ ಭವಾನಿ ನಗರ ಶ್ರೀರಂಗ ನಿವಾಸ ವೇದಿಕೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕದಳಿ ವೇದಿಕೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೋಭಾ ಮೇಟಿ ಮಾತನಾಡಿ, ನಾವೆಲ್ಲರೂ ಒತ್ತಡಗಳಲ್ಲಿ ಬದುಕುತ್ತಿದ್ದೇವೆ. ಸದಾ ಕೌಟುಂಬಿಕ ವ್ಯವಹಾರಗಳಲ್ಲಿ ಮಗ್ನರಾಗಿ ಅಧ್ಯಾತ್ಮವನ್ನು ಕಡೆಗಣಿಸುತ್ತಿದ್ದೇವೆ. ಉತ್ತಮವಾದದ್ದನ್ನು ಕೇಳಬೇಕು ಎನ್ನುವ ಉದ್ದೇಶದಿಂದ ಶ್ರಾವಣ ಮಾಸದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆ ಅಧ್ಯಕ್ಷೆ ಸೀತಾದೇವಿ ಬಸಾಪುರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿದರು. ನಿವೃತ್ತ ಉಪನ್ಯಾಸಕ ಎಸ್.ಆರ್. ಬಸಾಪುರ, ಗೌತಮ್‌ಚಂದ್ ಚೋಪ್ರಾ, ಕಾವೇರಿ ಬೋಲಾ, ಉಮಾ ದೊಡ್ಡಮನಿ, ಸುಮಿತ್ರಾ ಜಾಧವ್, ಪವನ ಚೋಪ್ರಾ, ಮಧು, ಆಶಾ ರಂಗನಾಥರಡ್ಡಿ, ಅನ್ವಿಕಾ ಇತರರು ಇದ್ದರು. ಶಸಾಪ ತಾಲೂಕು ಅಧ್ಯಕ್ಷ ಆರ್.ಎಲ್. ಪೊಲೀಸ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಹುಲಿಗೆಮ್ಮ ಭಜಂತ್ರಿ ಪ್ರಾರ್ಥಿನಿಸಿದರು. ಉಪನ್ಯಾಸಕಿ ಶಶಿಕಲಾ ಕುಕನೂರ ಸ್ವಾಗತಿಸಿದರು. ಶೋಭಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಂಕರ ಕುಕನೂರ ವಂದಿಸಿದರು.