

ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನಗಳು ಜ್ಯೋತಿಯ ಪ್ರತೀಕ. ಕನ್ನಡದ ಅಂತಃ ಸತ್ವದ ರಸಪಾಕ. ವಚನಗಳು ಬದುಕನ್ನು ತಿದ್ದಿ ಸಂಸ್ಕಾರಗೊಳಿಸುತ್ತವೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.
ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ಬಸವಶಾಂತಿ ಮಿಶನ್ ಸಭಾಭವನದಲ್ಲಿ ವಿದ್ಯಾವರ್ಧಕ ಸಂಘದ ಅನುಭವ ಮಂಟಪ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಾಸಿಕ ಕಾರ್ಯಕ್ರಮದಲ್ಲಿ ಅರಿವೇ ಗುರು ಅನುಭಾವವೇ ಗುರಿ ಕುರಿತು ಮಾತನಾಡಿದರು.
ಅರಿವು ತೃಪ್ತಿ ಹೊಂದುವುದು ಅನುಭಾವದಿಂದ ಸಾಧ್ಯ. ಚನ್ನ ಬಸವಣ್ಣನವರು ವಯಸ್ಸಿನಲ್ಲಿ ಕಿರಿಯರಾದರೂ ತಮ್ಮ ಅರಿವು ಹಾಗೂ ಆಚಾರ, ಸತ್ಯ ಶುದ್ಧ ನಡೆಯಿಂದ ಶರಣ ಸಂಕುಲದಲ್ಲಿ ದೊಡ್ಡವರಾಗಲು ಸಾಧ್ಯವಾಯಿತು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಇತರ ಶಿವಶರಣರು ರಚಿಸಿದ ವಚನಗಳು ನಮಗೆಲ್ಲ ಮಹಾಮಂತ್ರಗಳಾಗಿ ಶರಣರೆಲ್ಲ ಲೋಕ ಪೂಜ್ಯರಾದರು. ಬಸವಾದಿ ಶರಣರು ಎಲ್ಲರಂತೆ ಬದುಕಲಿಲ್ಲ. ಶ್ರೇಷ್ಠ ಆಚಾರ, ವಿಚಾರ, ನಡೆ ನುಡಿ ಸತ್ಯಶುದ್ಧ ಕಾಯಕ ಮಾಡುತ್ತ ಎಲ್ಲರಿಗಾಗಿ ಬದುಕಿದರು. ಜನ ಮೆಚ್ಚಲೆಂದು ಬದುಕದೇ ಮನದ ಮಹಾದೇವನ ಇಚ್ಚೆಯಂತೆ ಬದುಕಿದವರು ಎಂದರು.
ಡಾ. ವೀಣಾ ಬಿರಾದಾರ ಮಾತನಾಡಿ, ಶರಣ ಸಂಸ್ಕೃತಿಯಲ್ಲಿ ಅರಿವು, ಆಚಾರಕ್ಕೆ ಮಹತ್ವದ ಸ್ಥಾನವಿದೆ. ಅರಿವು ಎಂದರೆ ಜ್ಞಾನ, ಆಚಾರ ಎಂದರೆ ಒಳ್ಳೆಯ ನಡತೆ. ಅರಿವು ಆಚಾರವಿಲ್ಲದ ಬದುಕು ನಿರರ್ಥಕ. ಅರಿವಿನಲ್ಲಿ ಅಹಂ ಭಾವ ಇರಬಾರದು. ಕಾಯಕ ದಾಸೋಹದಲ್ಲಿ ವಿಶ್ವ ಕಲ್ಯಾಣದ ಗುಣಗಳಿವೆ. ವಚನಗಳು ಜ್ಞಾನದರ್ಶನ ನೀಡುವಂತಹವುಗಳಾಗಿವೆ ಎಂದರು.
ಅನುಭವ ಮಂಟಪ ಸಂಘದ ಅಧ್ಯಕ್ಷ ಡಾ. ಎಸ್.ಬಿ. ಕೋಟೂರ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಜಿನ್ನೂರ, ಎಂ.ಬಿ. ಕನ್ನೂರ, ಎಸ್.ಎಂ. ಯಲಿಗಾರ, ವಿಜಯ ಅಗಡಿ, ಇತರರು ಇದ್ದರು.