

ನರೇಗಲ್ಲ: ಅನುಭಾವಿಗಳನ್ನು, ಧರ್ಮದ ಹಾದಿಯಲ್ಲಿ ನಡೆಯುವವರನ್ನು ಶರಣರು ಎಂದು ಕರೆಯಲಾಗುತ್ತಿದೆ. ಹುಟ್ಟಿದ ಮೇಲೆ ಸಾವು ಖಚಿತ ಎಂಬುದನ್ನು ತಿಳಿದುಕೊಂಡಿದ್ದ ಅವರು ನಿಜವಾದ ಶರಣನಿಗೆ ಮರಣವೆ ಎಂದಿಗೂ ಮಹಾನವಮಿ ಎಂದು ನಂಬಿಕೊಂಡಿದ್ದರು ಎಂದು ಮಂಜುನಾಥ ಶಾಸ್ತ್ರಿಗಳು ಹೇಳಿದರು.
ಸಮೀಪದ ನಿಡಗುಂದಿ ಗ್ರಾಮದ ಕುಮಾರೇಶ್ವರ ಬಿಲ್ವಪತ್ರೆ ವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಶರಣರ ಸಂಪತ್ತಿನ ಕಾಲವೆಂದರೆ 12ನೇ ಶತಮಾನ. ಪುರುಷರಷ್ಟೆ ಅಲ್ಲದೆ ಮಹಿಳೆಯರೂ ವಚನ ರಚಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದರು. ನಿತ್ಯ ಬದುಕಿನ ಅನುಭವಗಳನ್ನೇ ವಚನಗಳನ್ನಾಗಿಸಿ ಹೊಸೆದರು. ಆಗ ರಚನೆಯಾದ ವಚನಗಳು ಇಂದಿಗೂ ಬದುಕಿಗೆ ದಾರಿದೀಪವಾಗಿವೆ ಎಂದರು.
ಅಡವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಧರ್ಮರ ಮಠದ ಷಣ್ಮುಖಪ್ಪಜ್ಜನವರು ಸಮ್ಮುಖ ವಹಿಸಿದ್ದರು. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಶಿವಪೂರ(ಹ) ಗ್ರಾಮದ ಸದ್ಭಕ್ತರು ನಿಡಗುಂದಿಕೊಪ್ಪದ ಶ್ರೀಅಭಿನವ ಚನ್ನಬಸವ ಮಹಾಸ್ವಾಮೀಜಿಗಳಿಗೆ ಮಿಗಳವರಿಗೆ ಗೌರವ ಸಮರ್ಪಿಸಿದರು.
ಸಮಾರಂಭದಲ್ಲಿ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.