

ಆನಂದಪುರ: ಜಾತಿ-ಜಾತಿಗಳಲ್ಲಿನ ತಾರತಮ್ಯ ಮತ್ತು ವೈರುಧ್ಯ ಮನೋಭಾವ ಹೊಡೆದು ಹಾಕಿ ಮನುಷ್ಯ ಜಾತಿಯೊಂದೇ ಎಂಬುದನ್ನು ಸಮಾಜದಲ್ಲಿ ಬಿತ್ತಲು ಬಸವಾದಿ ಶಿವಶರಣರ ಶ್ರಮ ಇಂದಿಗೂ ಅನುಕರಣೀಯ ಎಂದು ದಾವಣಗೆರೆಯ ಪವರ್ ಸ್ಟಾರ್ ಅಪ್ಪು ಟ್ರಸ್ಟ್ ಅಧ್ಯಕ್ಷ ಎಚ್.ಆರ್.ಗಂಗಾಧರಯ್ಯ ತಿಳಿಸಿದರು.
ಸಮೀಪದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ 574ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶತಮಾನಗಳಿಂದ ಮನುಷ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿದ್ದ ಜಾತಿ ಮನೋಭಾವ ತೊಲಗಿಸಲು ವಚನಕಾರರು ಹಗಲಿರುಳು ಶ್ರಮಿಸಿದರು. ಮನಸ್ಸನ್ನು ಕುಟುಕುವಂತಹ ಹಾಗೂ ಮನಃ ಪರಿವರ್ತನೆ ಆಗುವಂತಹ ವಚನಗಳಿಂದ ಎಲ್ಲರೂ ಸಮಾನರು ಎಂಬ ಮನೋಭಾವವನ್ನು ನಿರಂತರವಾಗಿ ಬಿತ್ತಿ ಯಶಸ್ಸು ಕಂಡರು. ಎಲ್ಲ ವೃತ್ತಿಗಳೂ ಮಹತ್ವದ್ದಾಗಿವೆ. ಕಾಯಕದಿಂದಲೇ ಕೈಲಾಸ ಮತ್ತು ಕಾಯಕದಿಂದಲೇ ಮುಕ್ತಿ ಪ್ರಾಪ್ತಿ ಎಂಬ ವಿಶ್ವ ಸಂದೇಶ ನೀಡಿದರು ಎಂದರು.
ಸಾನ್ನಿಧ್ಯ ವಹಿಸಿದ್ಧ ಮುರುಘಾಮಠದ ಡಾ. ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಸಮಾಜದ ಎದುರು ತೆರೆದಿಡಬೇಕು. ಶ್ರಮ ಪಟ್ಟು ದುಡಿಮೆ ಮಾಡಿದರೆ ಉತ್ತಮ ಫಲ ಪಡೆಯಲು ಸಾಧ್ಯ ಎಂದರು.
ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಲಕ್ಕವಳ್ಳಿ, ಮೂಡಹಾಗಲು, ಕೆರೆಹಿತ್ತಲು, ಗಿಳಾಲಗುಂಡಿ, ಚೆನ್ನಕೊಪ್ಪ ಗ್ರಾಮಗಳ ಭಕ್ತ ಮಂಡಳಿಯಿಂದ ಗೋಷ್ಠಿ ಸೇವೆ ನಡೆಯಿತು. ದೀಪೋತ್ಸವ ಸಮಿತಿ ಅಧ್ಯಕ್ಷ ಹರತಾಳು ನಾಗರಾಜ ಗೌಡ ಹಾಜರಿದ್ದರು.