

ವಿಜಯಪುರ: ಯಾವುದೇ ಫಲಾಪೇಕ್ಷೆ ಇಲ್ಲದೇ ನಾವು ಮಾಡುವ ಪ್ರಾಮಾಣಿಕ ಸೇವೆಯನ್ನು ದೇವರು ಮೆಚ್ಚುವನು. ನಾವು ದುಡಿದದ್ದರಲ್ಲಿ ಸ್ವಲ್ಪ ಭಾಗ ಸಮಾಜಕ್ಕೆ ವಿನಿಯೋಗಿಸಿದಾಗ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಇದನ್ನೇ ಶರಣರು ಕಾಯಕವೇ ಕೈಲಾಸ ಎಂದು ಕರೆದರು ಎಂಬುದಾಗಿ ಪ್ರೊ. ಐ.ಎಸ್. ಕಾಳಪ್ಪನವರ ಹೇಳಿದರು.
ನಗರದ ಎಸ್‌ಎಸ್ ಪಪೂ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ನಡೆದ ವಚನ ದಿನ ಮತ್ತು ದತ್ತಿ ಉಪನ್ಯಾಸದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ವಿದ್ಯಾರ್ಥಿ, ಯುವ ಜನರು ವಚನ ಸಾಹಿತ್ಯ ಓದಿನತ್ತ ಒಲವು ತೋರಬೇಕು. ಆ ಮೂಲಕ ಮೌಲ್ಯಗಳನ್ನು ಬೆಳೆಸಿಕೊಂಡು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಶಿವಾನಂದ ಮಠಪತಿ ಮಾತನಾಡಿ, ಸುತ್ತೂರಿನ ರಾಜೇಂದ್ರ ಮಹಾಸ್ವಾಮೀಜಿಗಳು ತಮ್ಮ ಜನ್ಮದಿನದಂದು ಸಮಾಜದ ಸ್ವಾಸ್ಥ್ಯಕ್ಕಾಗಿ ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ದೂರ ದೃಷ್ಟಿಯುಳ್ಳವರಾಗಿದ್ದ ಅವರು ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಿದವರು. ಅನ್ನ, ಆಶ್ರಯ, ಶಿಕ್ಷಣ ಎಲ್ಲರಿಗೂ ದೊರೆಯುವ ಹಾಗೆ ಮಾಡಿದ ಮಹಾನ್ ಸಂತರು ಎಂದು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗ ಆಶ್ರಮದ ಅಧ್ಯಕ್ಷ ಪಪೂ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಪ್ರಸ್ತುತ ಶರಣ ಸಾಹಿತ್ಯವು ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ. ಇಂಥ ದತ್ತಿ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿ ಮಕ್ಕಳಲ್ಲಿ ವಚನ ಸಾಹಿತ್ಯದ ಆಸಕ್ತಿ ಮೂಡಿಸಬೇಕು. ಅವರ ಬದುಕನ್ನು ಸುಂದರಗೊಳಿಸಬೇಕು. ಶರಣರ ಜೀವನ ತೆರೆದ ಕನ್ನಡಿಯಂತೆ. ಅವರ ಆದರ್ಶಗಳು, ಸರಳ ಜೀವನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸುಂದರ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೇವೆ ಎಂದರು.
ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಸೋಹಿ ವಿಜಯಕುಮಾರ್ ಹಲಕೂಡೆ, ಮ.ಗು. ಯಾದವಾಡ, ಬಿ.ಎಚ್. ಬಾದರಬಂಡಿ, ಎಸ್.ವೈ. ಗದಗ, ಪರಶುರಾಮ ಪೋಳ, ಎಸ್.ಎಂ. ನಾಯ್ಕೋಡಿ, ವೈಶಾಲಿ ಪಾಟೀಲ, ಜೆ.ಎ. ಬಿರಾದರ, ಜೆ.ಎಂ. ಬಿರಾದಾರ, ವಿಕಾಸ ಕಲಬಳಗಿ ಮತ್ತಿತರರಿದ್ದರು.
ರೇಖಾ ಕುಳಲಿ ನಿರೂಪಿಸಿದರು. ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಆಕಾಶ ರಾಮತೀರ್ಥ ವಂದಿಸಿದರು.