

ಅಜ್ಜಂಪುರ: ಎಲ್ಲ ಜಾತಿ, ಮತ ಮೀರಿ ಸಮ ಸಮಾಜ ಕಟ್ಟುವ ಪರಿಕಲ್ಪನೆ ಹೊಂದಿದ್ದ 12ನೇ ಶತಮಾನದ ವಚನಕಾರರು ವಿಶ್ವಕ್ಕೆ ವಚನ ಸಾಹಿತ್ಯದ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ಕಸಾಪ ಸೊಲ್ಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ವಚನಗಳ ಮೂಲಕ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದರು. ಬಸವಣ್ಣನವರು ಜಗತ್ತಿನ ಮೊದಲ ಜಾತಿಮುಕ್ತ ಚಿಂತಕ ಹಾಗೂ ದಾರ್ಶನಿಕ ಎಂದು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯ ಕುರಿತು ದತ್ತಿ ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ವಚನ ಸಾಹಿತ್ಯ ವಿದೇಶಗಳಲ್ಲೂ ಪ್ರಸಿದ್ಧಿ ಪಡೆಯುತ್ತಿದೆ. ವಚನದ ತತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿದರು. ಅವರಿಗೆ ನೂರಾರು ವಚನಕಾರರು ಜತೆಯಾದರು. ಶರಣರು ಜಾತಿ, ಧರ್ಮ ಮೀರಿ ಲಿಂಗ, ವರ್ಣ, ವರ್ಗರಹಿತ ಸಮಾಜ ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಸಂಚಾಲಕ ಎಸ್.ಪರಮೇಶ್, ತಾಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಸಚಿನ್ ಸಿಂಗ್, ಹಿರೇನಲ್ಲೂರು ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಜಯಣ್ಣ, ಜಾನಪದ ಕಲಾವಿದರಾದ ಮುಗುಳಿ ಲಕ್ಷ್ಮೀದೇವಮ್ಮ, ಜಯಣ್ಣ, ಸೊಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ, ಮುಖ್ಯಶಿಕ್ಷಕ ಎಸ್.ಟಿ.ಅಣ್ಣಪ್ಪ, ಟಿ.ಎಂ.ಬಸವರಾಜಪ್ಪ, ಗಾಯತ್ರಮ್ಮ, ನವೀನ್, ತಿಪ್ಪೇಶಪ್ಪ, ಲಲಿತಮ್ಮ, ಸುನಂದಮ್ಮ, ಮೈತ್ರೇಯಿ ಇದ್ದರು.