ಮೈಸೂರು: ಬಸವ ಜಯಂತಿ ಅಂಗವಾಗಿ ಏ.30ರಂದು ನಗರದ ಕಲಾಮಂದಿರದಲ್ಲಿ ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಬಿ.ಕೆ.ನಾಗರಾಜು ಬ್ಯಾತಹಳ್ಳಿ ತಿಳಿಸಿದರು.
ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾಡಳಿತದಿಂದ ಕಾರ್ಯಕ್ರಮ ಬಸವ ಜಯಂತಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಈ ವಚನ ಗಾಯನ ಸ್ಪರ್ಧೆ ಇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳಾ ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದ್ದು, ಒಂದು ತಂಡದಲ್ಲಿ ವಾದ್ಯಗಾರರು ಸೇರಿದಂತೆ ಏಳು ಸದಸ್ಯರು ಇರಬಹುದು. ವಿಜೇತ ತಂಡಗಳಿಗೆ ಪ್ರಥಮ ಸ್ಥಾನಕ್ಕೆ 10 ಸಾವಿರ ರೂ. ದ್ವಿತೀಯ 6 ಸಾವಿರ ರೂ. ತೃತೀಯ 3 ಸಾವಿರ ರೂ. ಹಾಗೂ 5 ತಂಡಗಳಿಗೆ ತಲಾ ಒಂದು ಸಾವಿರ ರೂ. ಸಮಾಧಾನಕರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಜಯಂತಿ ಅಂಗವಾಗಿ ಅಂದು ಜೆಎಸ್‌ಎಸ್ ವಿದ್ಯಾಪೀಠ ಮುಂಭಾಗದ ಬಸವ ಪ್ರತಿಮೆ ಆವರಣದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಹಾಗೂ ಸಂಜೆ 4ರಿಂದ 6ರವರೆಗೆ ತಂಡದ ನೋಂದಣಿ ಮಾಡಬಹುದು. ನೋಂದಣಿಗೆ ಏ.28 ಕೊನೆಯ ದಿನವಾಗಿದ್ದು, ಪ್ರತಿ ತಂಡಕ್ಕೆ 500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊ.ಸಂ. 9886196675 ಅನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಪ್ರಸಾಸ್, ಖಜಾಂಚಿ ಎಚ್.ಪಿ.ರಾಜು, ಸಂಘಟನಾ ಕಾರ್ಯದರ್ಶಿಗಳಾದ ರೇಚಣ್ಣ, ಚಿಕ್ಕಳ್ಳಿ ಶಿವು ಇದ್ದರು.