ವಚನ ಶ್ರಾವಣದಿಂದ ಸಂಸ್ಕೃತಿ ಪ್ರಸಾರ - ಪಿನಾಕಪಾಣಿ ಅಭಿಮತ

Vachana Shravana - 1
Published on

ಬೆಂಗಳೂರು: ಪುಟ್ಟ ಪುಟ್ಟ ಮಕ್ಕಳು ವಚನಕಾರರ ವೇಷ ಧರಿಸಿಕೊಂಡು ಹಾಡಿ ಕುಣಿಯುವುದು ಕೇವಲ ಮನರಂಜನೆಯಲ್ಲ. ಅದು ಸಂಸ್ಕೃತಿ ಪ್ರಸಾರ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದ್ದಾರೆ.

ಅಂಧ್ರಹಳ್ಳಿ ಡಿ ಗ್ರೂಪ್ ಬಡಾವಣೆಯ ನಾಟ್ಯಸನ್ನಿಧಿ ಅಂಗಳದಲ್ಲಿ ನಡೆದ ವಚನ ಶ್ರಾವಣದ 7ನೇ ದಿನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 30 ದಿನ 36 ಅಂಗಳಗಳಲ್ಲಿ ವಚನ ಶ್ರಾವಣ ನಡೆಯುತ್ತಿದ್ದು ವಚನಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ವಚನ ಹೇಳುವುದು, ವಚನಕಾರರ ವೇಷ ಧರಿಸಿ ಪರಿಚಯ ಮಾಡುವುದು ಕನ್ನಡ ಭಾಷೆಯ ಬಗೆಗೆ ಮಕ್ಕಳಲ್ಲಿ ಆಸಕ್ತಿ ಹಾಗೂ ಪ್ರೀತಿ ಮೂಡಿಸುವ ಗುಣಾತ್ಮಕ ಕಾರ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಾಲರಾಜ್ ಮಾತನಾಡಿ, ಅತ್ಯಂತ ಸರಳ ಕನ್ನಡದಲ್ಲಿರುವ ವಚನಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಕಲಿಸುವ ಮೂಲಕ ಸುಸಂಸ್ಕೃತರನ್ನಾಗಿ ಮಾಡಬೆಕು ಎಂದು ಸಲಹೆ ನೀಡಿದರು. ಗಾಯಕಿ ಟಿ.ಎಂ. ಜಾನಕಿ ವಚನಗಳನ್ನು ಹಾಡಿದರು. ನಾಟ್ಯ ಸನ್ನಿಧಿ ವಿದ್ಯಾರ್ಥಿಗಳು ವಚನ ನೃತ್ಯ ಪ್ರದರ್ಶಿಸಿದರು. ನಾಟ್ಯ ಸನ್ನಿಧಿಯ ಸಂಸ್ಥಾಪಕಿ ಡಾ. ಮೋನಿಷಾ ನವೀನ್, ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಿವಪ್ರಕಾಶ್, ನಿವೃತ್ತ ಶಿಕ್ಷಕರಾದ ಹೇಮಾವತಿ, ಹನುಮಯ್ಯ, ನಾಟ್ಯ ಸನ್ನಿಧಿಯ ಪೋಷಕಿ ಸುಮಿತ್ರಮ್ಮ, ಕೀಬೋರ್ಡ್ ಶಿಕ್ಷಕ ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net