

ಮೈಸೂರು: ಹನ್ನೆರಡನೇ ಶತಮಾನದ ಕಲ್ಯಾಣದ ಕೋಲಾಹಲದ ನಂತರ ಕಾಲಗರ್ಭದಲ್ಲಿಯೇ ಹೂತು ಹೋಗಿದ್ದ ವಚನ ಸಾಹಿತ್ಯವನ್ನು ಶೋಧಿಸಿ, ಸಂಶೋಧಿಸಿ, ಸಂರಕ್ಷಿಸಿದವರು ಫ.ಗು. ಹಳಕಟ್ಟಿ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಣ್ಣಿಸಿದರು.
ಮೈಸೂರು ಜಿಲ್ಲಾ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಶ್ರೀರಾಂಪುರದ ಶ್ರೀವಿವೇಕ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯ ಪ್ರಚುರಪಡಿಸಲು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರಿಂದಾಗಿ ನಮಗೆ ವಚನ ಸಾಹಿತ್ಯದಂತಹ ದೊಡ್ಡಪರಂಪರೆಯ ಪರಿಚಯವಾಗಿದೆ. ಹಳಕಟ್ಟಿಯವರು ಶಿಕ್ಷಣ, ಸಾಹಿತ್ಯ, ಸಹಕಾರ, ಪ್ರಕಟಣೆ, ಪತ್ರಿಕೋದ್ಯಮ, ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಬಿಜಾಪುರ ನಗರಸಭೆ ಸದಸ್ಯರಾಗಿದ್ದರು. ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಇಂದು ಬೃಹತ್ ಆಗಿ ಬೆಳೆದಿರುವ ವಿಜಯಪುರ ಲಿಂಗಾಯತ್ ಸೊಸೈಟಿ ಆರಂಭಕ್ಕೆ ಕಾರಣಕರ್ತರು ಎಂದು ವಿವರಿಸಿದರು.
ಸುತ್ತೂರು ಜಗದ್ಗುರು ಶ್ರೀಪರ್ವತೇಂದ್ರ ಶಿವಾಚಾರ್ಯ ಸ್ವಾಮೀಜಿ ದತ್ತಿ ಉಪನ್ಯಾಸ ನೀಡಿದ ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಮಾತನಾಡಿ, ವಚನ ಸಾಹಿತ್ಯ ಸಂಗ್ರಹ, ಮುದ್ರಣದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಸೇವೆ ಅನನ್ಯವಾದುದು. ಇದರಿಂದಾಗಿಯೇ ಫ.ಗು.ಹಳಕಟ್ಟಿ ಅವರು ವಚನ ಪಿತಾಮಹ ಎನಿಸಿಕೊಂಡಿದ್ದಾರೆ ಎಂದರು.
ಅನುಭವದಿಂದ ರಚಿತವಾಗಿರುವ ವಚನ ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ವಚನಕಾರರು ನುಡಿದಂತೆ ನಡೆದವರು. ಇಂತಹ ವಚನ ಸಾಹಿತ್ಯ ಇಂದು ನಮಗೆ ಅಭ್ಯಾಸ ಮಾಡಲು ಸಿಗಲು ಫ.ಗು. ಹಳಕಟ್ಟಿ ಅವರು ಕಾರಣ. ಹಳಕಟ್ಟಿಯವರು ತಮಗೋಸ್ಕರ ಬದುಕಲಿಲ್ಲ, ಸಮಾಜಕೋಸ್ಕರ ಬದುಕಿದವರು ಎಂದು ಹೇಳಿದರು.
ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಮುದ್ರಣಕ್ಕಾಗಿ ತಮ್ಮ ಮನೆಯನ್ನು ಮಾರಿ, ಹಿತಚಿಂತಕ ಎಂಬ ಮುದ್ರಣಾಲಯ ಆರಂಭಿಸಿದರು. ಅಲ್ಲದೆ ನ್ಯುಮೋನಿಯಾದಿಂದ ಬಳಲುತ್ತಾ ಮೂರು ವರ್ಷ ವಿಶ್ರಾಂತಿಯಲ್ಲಿದ್ದಾಗಲೂ ವಚನ ಸಾಹಿತ್ಯ ಕಾಯಕವನ್ನು ನಿಲ್ಲಿಸಲಿಲ್ಲ ಎಂದು ಅವರು ಸ್ಮರಿಸಿದರು.
ಕುವೆಂಪು ಅವರಿಗೆ ಗುರುಗಳಾಗಿದ್ದ ಬಿಎಂಶ್ರೀ ಅವರು ವಿಜಯಪುರಕ್ಕೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಗೋಲಗುಮ್ಮಟ ನೋಡುವಂತೆ ಸಂಘಟಕರು ಆಹ್ವಾನಿಸಿದರು. ಆದರೆ ಗೋಲಗುಮ್ಮಟಕ್ಕಿಂತ ನಾನು ವಚನ ಗುಮ್ಮಟ ನೋಡಬೇಕಾಗಿದೆ ಎಂದು ಫ.ಗು. ಹಳಕಟ್ಟಿ ಅವರನ್ನು ಭೇಟಿಯಾದರು ಎಂದು ಸ್ಮರಿಸಿದರು.
ವಚನ ಸಾಹಿತ್ಯ ಉಳಿಯಬೇಕು ಮತ್ತು ಬೆಳೆಯಬೇಕು. ಆದ್ದರಿಂದ ಯುವಜನತೆ ದಿನಕ್ಕೆ ಎರಡು- ಮೂರು ವಚನವನ್ನು ಓದಿ, ಅರ್ಥೈಸಿಕೊಳ್ಳಬೇಕು. ಶರಣರ ಬದುಕನ್ನು ಅನುಸರಿಸಬೇಕು. ಆತ್ಮಕಥನಗಳನ್ನು ಓದಿ ಜೀವನಪಾಠ ಕಲಿಯಬೇಕು ಎಂದು ಸಲಹೆ ನೀಡಿದರು.
ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಹಾಗೂ ಶ್ರೀವಿವೇಕ ವಿದ್ಯಾಲಯ ಪಿಯು ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ನಾಗೇಶ್ ಮಾತನಾಡಿ, ವಿವೇಕಾನಂದರು ಹೇಳಿದಂತೆ ಇತರರಿಗಾಗಿ ಬಾಳಿ, ಇಲ್ಲದಿದ್ದರೆ ಇದ್ದು ಸತ್ತಂತೆ. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಸ್ಮರಿಸಿ. ಜೀವನದಲ್ಲಿ ವಿವೇಕ, ವಿದ್ಯೆ ಮತ್ತು ಸಂಸ್ಕಾರವನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಇವತ್ತು ವಚನ ಸಾಹಿತ್ಯ ಎಲ್ಲರ ಮನ, ಮನೆ, ಮಸ್ತಕಕ್ಕೆ ತಲುಪಲು ಫ.ಗು. ಹಳಕಟ್ಟಿ ಅವರು ಕಾರಣ. ವಚನ ಸಾಹಿತ್ಯ, ಶರಣ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ, ಅದರಲ್ಲೂ ನಾಳಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ತಾಲೂಕು ಅಧ್ಯಕ್ಷ ದೇವರಾಜ್ ಪಿ.ಚಿಕ್ಕಹಳ್ಳಿ, ಲಲಿತಾ ಪಾಟೀಲ್ ವಚನ ಗಾಯನ ನಡೆಸಿಕೊಟ್ಟರು. ಕವಿ ಎಸ್.ಪುಟ್ಟಪ್ಪ ಮುಡಿಗುಂಡ ಕಾರ್ಯಕ್ರಮ ನಿರೂಪಿಸಿದರು.
ಶ್ರೀವಿವೇಕಾ ವಿದ್ಯಾಲಯ ಪಿಯು ಕಾಲೇಜಿನ ಆಡಳಿತಾಧಿಕಾರಿ ಭವಾನಿ ನಾಗೇಶ್, ಸಿದ್ದೇಶ್ ಬಾಬು, ಶಿವಕುಮಾರ್, ಬಸವಲಿಂಗಪ್ಪ, ಯಶವಂತ್, ಗೋವಿಂದಾಚಾರಿ ಇತರರು ಇದ್ದರು.