

ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲು ಗುರು ಬಸವಣ್ಣನವರು ಕುಳಿತುಕೊಳ್ಳುತ್ತಿದ್ದ ಪವಿತ್ರ ಪರುಷಕಟ್ಟೆಗೆ ಬೇಡಿದ್ದನ್ನು ಕೊಡುವ ಶಕ್ತಿ ಇದೆ ಎಂದು ಪೂಜ್ಯ ಡಾ.ಅನ್ನಪೂರ್ಣ ಅಕ್ಕ ನುಡಿದರು.
ನಗರದ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪರುಷ ಕಟ್ಟೆವರೆಗೆ ಗುರುವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಮೆರವಣಿಗೆ ನಂತರ ಪೂಜೆ, ವಚನ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪವಿತ್ರ ಸ್ಥಳದಲ್ಲಿ ಯಾವುದೇ ಸಂಕಲ್ಪ ಮಾಡಿದರೂ ಈಡೇರುತ್ತದೆ. ಯಾವುದೇ ಹೊಸ ಕಾರ್ಯವನ್ನು ಇಲ್ಲಿ ಪೂಜೆಯೊಂದಿಗೆ ಆರಂಭಿಸಬೇಕು ಎಂದರು.
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಮಹಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ವಚನಗಳ ಪ್ರಸಾರ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಚನಗಳು ಅಂತರಂಗದ ಕತ್ತಲೆ ಕಳೆದು ಜ್ಞಾನದ ಬೆಳಕು ನೀಡುತ್ತವೆ. ಶರಣರು ತಮ್ಮ ಪ್ರಾಣವನ್ನು ಸಮಾಜ, ಸಂಘ, ಆಧ್ಯಾತ್ಮಿಕಕ್ಕಾಗಿ ಸವೆಸಿದರು. ಪರುಷ ಮಣಿಗಿಂತ ಪವಿತ್ರವಾದವರು ಗುರು ಬಸವಣ್ಣನವರು. ಎಲ್ಲರ ಪ್ರಾಣ ವಚನ ಸಾಹಿತ್ಯದಲ್ಲಿದೆ ಎಂದು ಹೇಳಿದರು.
ಬಸವಧರ್ಮ ಪೀಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶಾಸಕ ಶರಣು ಸಲಗರ, ಪೂಜ್ಯ ಚಿತ್ರಮ್ಮತಾಯಿ, ಪೂಜ್ಯ ಗಾಯತ್ರಿ ತಾಯಿ, ಪೂಜ್ಯ ಸತ್ಯಕ್ಕ ತಾಯಿ, ಮಾತೆ ಕಲ್ಯಾಣಮ್ಮ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಾಳೆ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟಿ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಬಿಡಿಪಿಸಿ ನಿರ್ದೇಶಕರಾದ ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ವಿಜಯಲಕ್ಷ್ಮೀ ಗಡ್ಡೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ತೊಂಡಾರೆ, ಡಾ.ಅಮರನಾಥ ಸೋಲಪುರೆ, ಪ್ರಮುಖರಾದ ಬಸವರಾಜ ಬಾಲಿಕಿಲೆ, ಶಿವಕುಮಾರ ಬಿರಾದಾರ, ರವೀಂದ್ರ ಕೊಳಕೂರ, ಲಿಂಗರಾಜ ಶಾಶೆಟ್ಟಿ, ಡಾ.ಸಂಗೀತಾ ಮಂಠಾಳೆ, ಸುಲೋಚನಾ ಗುದಗೆ, ಸೋನಾಲಿ ನೀಲಕಂಠೆ, ಮೀನಾ ಜಾಧವ್, ಕವಿತಾ ಮೂಲಗೆ, ಸುಮಂಗಲಾ ಬಸವನ ಬಾಗೇವಾಡಿ ಇತರರಿದ್ದರು.
ಸಾಂಸ್ಕೃತಿಕ ವೈಭವದ ಮೆರವಣಿಗೆ: ಶ್ರೀ ಬಸವೇಶ್ವರ ದೇವಸ್ಥಾನದಿಂದ ಪರುಷ ಕಟ್ಟೆವರೆಗೆ ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯ ಹಾಗೂ ಬಸವಣ್ಣನವರ ಬೆಳ್ಳಿ ಮೂರ್ತಿಯ ಮೆರವಣಿಗೆ ಶರಣ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಛತ್ರ-ಚಾಮರದೊಂದಿಗೆ ವಚನ ಗಾಯನ, ಶರಣ-ಶರಣೆಯರ ವಚನ ಒಡಪು, ಜೈಘೋಷಗಳು ಮೊಳಗಿದವು. ಸಮವಸವಸವ್ತ್ರ ಧರಿಸಿದ ಮಹಿಳೆಯರು ತಲೆ ಮೇಲೆ ಹೊತ್ತ ವಚನ ಸಾಹಿತ್ಯ ಕಟ್ಟುಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು.