

ಬೆಳಗಾವಿ : ವಚನಗಳು ಕನ್ನಡದ ಅಮೂಲ್ಯ ರತ್ನಗಳು. ಜೀವನದ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಹೇಳಿದವರು ಶರಣರು. ಅವರ ವಚನಗಳನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಪಠ್ಯದ ಮೂಲಕ ತಿಳಿಸುವ ಕಾರ್ಯ ಜರುಗಬೇಕೆಂದು ಬೆಳಗಾವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಗೀತಾ ದಯಣ್ಣವರ ಹೇಳಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಮಾವಾಸ್ಯೆ ಅನುಭಾವ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಶಿಕ್ಷಣದ ಪರಿಕಲ್ಪನೆ ವಿಷಯ ಕುರಿತು ಅನುಭಾವ ನೀಡಿ ಮಾತನಾಡಿದರು.
ಶರಣ ವಚನಗಳು ಸಮಾಜವನ್ನು ಪರಿವರ್ತಿಸುವ ಸಂಜೀವಿನಿಯಾಗಿವೆ ಬೌದ್ಧಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ವಿಕಸನಗೊಳಿಸುವ ಶಕ್ತಿ ವಚನಗಳಲ್ಲಿ ಅಡಗಿದೆ. ಪ್ರತಿ ವಚನಗಳಲ್ಲಿಯೂ ನೈತಿಕ ಶಿಕ್ಷಣ ಹಾಸುಹೊಕ್ಕಾಗಿವೆ. ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳಿಗೆ ನೈತಿಕ ಹಾಗೂ ಸಂಸ್ಕಾರ ಭರಿತವಾದ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ವಚನಗಳನ್ನು ಅಳವಡಿಸುವ ಕಾರ್ಯವನ್ನು ಪಠ್ಯಪುಸ್ತಕ ಮಂಡಳಿಯವರು ಮಾಡಲೇಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಮಹಾಸಭೆಯು ಅನೇಕ ಯುವಪ್ರತಿಭೆಗಳಿಗೆ ವೇದಿಕೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಮಕ್ಕಳಲ್ಲಿ ಜ್ಞಾನದ ಬೀಜವನ್ನು ಬಿತ್ತಿದಾಗ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಿಸಲು ಸಾಧ್ಯ. ವಚನಕಾರರು ತಮ್ಮ ವಚನಗಳಲ್ಲಿ ಅಂತಹ ಜೀವನದ ವಿಧಾನಗಳನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಮಹಾಸಭೆ ಮಕ್ಕಳಿಗಾಗಿ ಹಾಗೂ ಯುವ ಜನತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ರೂಪಿಸುತ್ತಿದೆ. ಎಲ್ಲರೂ ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಶರಣ ಸಾಹಿತ್ಯದಲ್ಲಿ ಬದುಕಿನ ಎಲ್ಲ ಆಯಾಮಗಳು ಮೂಡಿಬಂದಿವೆ. ಅವರು ಜೀವನವನ್ನು ಸ್ವಾನುಭಾವದ ಮೂಲಕ ನಿರೂಪಿಸಿದರು. ಅವರ ವಚನಗಳು ಅನುಭಾವದ ಪುಂಜಗಳಾಗಿವೆ. ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ಹೃದಯಕ್ಕೆ ಮುಟ್ಟುವಂತೆ ವಚನಗಳನ್ನು ರಚಿಸಿದ್ದಾರೆ. ಹೃದಯದ ಕಣ್ಣಿನಿಂದ ಅವುಗಳನ್ನು ಅವಲೋಕಿಸಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆನೀಡಿದರು. ಅಕ್ಕಮಹಾದೇವಿ ತೆಗ್ಗಿ, ಡಾ.ಗುರುದೇವಿ ಹುಲೆಪ್ಪನವರಮಠ, ಪ್ರೊ.ಎ.ಬಿ.ಕೊರಬು, ಪ್ರಸಾದ ಹಿರೇಮಠ, ಗುರುದೇವ ಪಾಟೀಲ, ಡಾ.ಮಹೇಶ ಗುರನಗೌಡರ ಮಹಾಸಭೆಯ ಪದಾಧಿಕಾರಿ ಇದ್ದರು. ಅನಿತಾ ಮಾಲಗತ್ತಿ ವಚನ ಪ್ರಾರ್ಥಿಸಿದರು. ಸುಧಾ ಪಾಟೀಲ ಸ್ವಾಗತಿಸಿದರು. ಜ್ಯೋತಿ ಮಾಳಿ ನಿರೂಪಿಸಿದರು. ವಿ.ಕೆ. ಪಾಟೀ ವಂದಿಸಿದರು.